ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಗದಗ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದಲ್ಲಿನ ಶೌಚಾಲಾಯಗಳನ್ನು ಒಡೆದು ಹಾಕಿ ಡಯಾಲಿಸಿಸ್ ಕೇಂದ್ರಗಳಿಗೆ ಹಾಗೂ ಬಯಲು ಶೌಚಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಗದಗ ನಗರಸಭೆ ಅಧಿಕಾರಿಗಳು ಕಳೆದ ಎರಡು ವರ್ಷಗಳ ಹಿಂದೆ ಅವಳಿ ನಗರದಲ್ಲಿನ ಎಲ್ಲ ಮೂತ್ರಾಲಯಗಳನ್ನು ಕೆಡವಿ ಹಾಕಿದ್ದಾರೆ. ಈ ಮೂತ್ರಾಲಯಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಅವಳಿ ನಗರದಲ್ಲಿನ ನಾಗರಿಕರು ತೀವ್ರವಾಗಿ ಪರಿತಪಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ಕಿಡಿಕಾರಿದರು.