- ಕೋಟೆ ಬಾಗಿಲು ಮುಚ್ಚಿ ಪ್ರವೇಶ ನೀಡಿದ ಇಲಾಖೆ
ಜ್ಯೂಗೆ ಸಂಕ್ರಾಂತಿ ತರುತ್ತಾ ಸಂಕಷ್ಟ!?
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ, ಹಕ್ಕಿಜ್ವರ ಭೀತಿ ಮಧ್ಯೆಯೂ ಹೊಸ ವರ್ಷದ ಮೊದಲ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ದಿನವಾದ ಗುರುವಾರದಂದು ತಾಲ್ಲೂಕಿನ ಬಿಂಕದಕಟ್ಟಿ ಮಕ್ಕಳ ಉದ್ಯಾನವನ, ಮೃಗಾಲಯ ಹಾಗೂ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 5ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಆಗಮಿಸಿದ್ದರು.

ಅಪಾರ ಜನಸ್ತೋಮದಿಂದಾಗಿ ಮೃಗಾಲಯದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಬೆರಳೆಣಕೆಯಷ್ಟು ಜನರು ಮಾತ್ರ ಮುಖಕ್ಕೆ ಮಾಸ್ಕ್ ಧರಿಸಿದ್ದರು. ವ್ಯಕ್ತಿಗತ ಅಂತರ ಮರೆತಿದ್ದ ಪ್ರವಾಸಿಗರು, ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು.
ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗದಿದ್ದರೂ, ಮೊನ್ನೆಯಷ್ಟೇ ಜಿಲ್ಲೆಯ ಡಂಬಳ ಗ್ರಾಮದ ಐಬಿಯಲ್ಲಿ ಹತ್ತಾರು ಹಕ್ಕಿಗಳು ಮೃತಪಟ್ಟಿದ್ದವು. ಇದರಿಂದ ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಾಗಿತ್ತು. ಈ ನಡುವೆಯೇ ಮೃಗಾಲಯಕ್ಕೆ ಆದಾಯ ಬರುತ್ತೆ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ಸಂಕ್ರಾಂತಿಯಂದು ಅಪಾರ ಸಂಖ್ಯೆಯ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೇ, ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಣೆ ಬಂದ್ ಮಾಡಿ, ಪ್ರಾಣಿ ವೀಕ್ಷಣೆಗೆ ಅವಕಾಶ ನೀಡಿದ್ದರು.

ಬೆಳಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ, ಮೃಗಾಲಯ ಮತ್ತು ಉದ್ಯಾನವನದ ಪ್ರವೇಶ ಟಿಕೆಟ್ ಪಡೆಯಲು ಮಾರುದ್ಧ ಸಾಲುಗಟ್ಟಿ ನಿಂತಿದ್ದರು. ನಾಲ್ವರು ಅರಣ್ಯ ಸಿಬ್ಬಂದಿಗಳು ಟಿಕೆಟ್ ನೀಡುತ್ತಿದ್ದರೂ, ಜನರ ಸಂಖ್ಯೆ ಸಾಯಂಕಾಲದವರೆಗೂ ಯಥಾಸ್ಥಿತಿಯಲ್ಲಿಯೇ ಗೋಚರವಾಯಿತು. ಇನ್ನು, ಟಿಕೆಟ್ ದರ ದೊಡ್ಡವರಿಗೆ 40 ರೂ. ಚಿಕ್ಕವರಿಗೆ 20 ರೂ. ನಿಗದಿ ಪಡಿಸಲಾಗಿತ್ತು.

ಮೃಗಾಲಯದಲ್ಲಿ ಕೇವಲ ಪ್ರಾಣಿಗಳ ವೀಕ್ಷಣೆಗಷ್ಟೇ ಅವಕಾಶ ಕಲ್ಪಿಸಿದ್ದರಿಂದ ಪ್ರವಾಸಿಗರು ವಿವಿಧ ವನ್ಯ ಜೀವಿಗಳ ಕಲರವ ಕಣ್ತುಂಬಿಕೊಂಡರು. ಚಿಕ್ಕ ಮಕ್ಕಳು ಜಾರು ಬಂಡಿ, ಜೋಕಾಲಿ ಆಡಿ ಸಂತಸ ಪಟ್ಟರು. ಟೆಡ್ಡಿ ಬೇರ್, ಮಕ್ಕಳ ಆಟಿಕೆ ಸಾಮಾನು, ಬಣ್ಣ ಬಣ್ಣದ ಬಲೂನ್ ಮಾರಾಟ ಮತ್ತು ಖರೀದಿ ಜೋರಾಗಿತ್ತು.

ಕೊರೊನಾ ಭೀತಿಯಿಂದಾಗಿ ಜಿಲ್ಲೆಯ ಜನರು ಜಿಲ್ಲೆ ಬಿಟ್ಟು ಬೇರೆಡೆ ಪ್ರವಾಸ ಕೈಗೊಂಡಿರದ ಕಾರಣ ಸಂಕ್ರಾಂತಿ ಹಬ್ಬ ಆಚರಣೆಗಾಗಿ ಜ್ಯೂಗೆ ಬಂದಿದ್ದ ಬಹುತೇಕ ಪ್ರವಾಸಿಗರು ಹಬ್ಬಕ್ಕಾಗಿ ಮನೆಯಲ್ಲೇ ತಯಾರಿಸಿದ್ದ ವಿವಿಧ ಬಗೆಯ ಸಿಹಿ, ಖಾರದ ಖಾದ್ಯಗಳನ್ನು ಮೃಗಾಲಯಕ್ಕೆ ಬುತ್ತಿ ಕಟ್ಟಿಕೊಂಡು ಬಂದಿದ್ದರು. ಅಲ್ಲಿಯೇ ಕುಟುಂಬಸ್ಥರು ಒಂದೆಡೆ ಮರದ ಕೆಳಗೆ ಗುಂಪಾಗಿ ಕುಳಿತು ಪ್ರಕೃತಿ ಸೊಬಗಿನಲ್ಲಿ ಊಟ ಸವಿದು ಸಂತೋಷ ಪಟ್ಟರು.
ಫೋಟೋ ಕ್ರೇಜ್
ಮೃಗಾಲಯಕ್ಕೆ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜ್ಯೂನಲ್ಲಿನ ಪ್ರಾಕೃತಿಕ ಸೌಂದರ್ಯದಲ್ಲಿ ತಮಗಿಷ್ಟ ಬಂದಂತೆ ಮೊಬೈಲ್‌ನಲ್ಲಿ ಫೋಟೋ ಸೆರೆ ಹಿಡಿದು ಖುಷಿ ಪಡುತ್ತಿದ್ದರು. ಇನ್ನು, ಪ್ರೇಮಿಗಳಂತೂ ಉತ್ತರಾಯಣ ಕಾಲದ ಮೊದಲ ದಿನದಂದು ಮೃಗಾಲಯದ ಸೌಂದರ್ಯ ಆಸ್ವಾದಿಸಿ ಸಂತೋಷಿಸಿದರು. ಅದರಂತೆ, ಕುಟುಂಬ ಸಮೇತ ಆಗಮಿಸಿರುವವರು ಕುಟುಂಬ ಸದಸ್ಯರೆಲ್ಲರೂ ಗುಂಪು, ವೈಯಕ್ತಿಕ ಛಾಯಾಚಿತ್ರಕ್ಕೆ ಫೋಸ್ ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರ ಹರಸಾಹಸ
ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರ ದಂಡು ಸ್ವಂತ, ಖಾಸಗಿ ವಾಹನಗಳ ಮೂಲಕ ಮೃಗಾಲಯಕ್ಕೆ ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಇಕ್ಕಟ್ಟಾದ ಜ್ಯೂ ಮುಂದಿರುವ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳುತ್ತಿದ್ದರೂ, ರಸ್ತೆಯುದ್ದಕ್ಕೂ ಜನ, ವಾಹನಗಳೇ ತುಂಬಿದ್ದವು. ಇದರಿಂದ ಸಂಚಾರಕ್ಕೂ ಅಡೆತಡೆ ಉಂಟಾಗುತ್ತಿತ್ತು. ಅಲ್ಲದೇ, ಪ್ರವೇಶ ಟಿಕೆಟ್ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರಿಂದ ನೂಕುನುಗ್ಗಲು ಆಗುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಮೃಗಾಲಯ ವೀಕ್ಷಣೆಗೆ ಸಂಕ್ರಾಂತಿ ದಿನ ೫,೦೦೦ ಜನರು ಬರುತ್ತಾರೆಂದು ನಿರೀಕ್ಷೆ ಮಾಡಿದ್ವಿ. ಆದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಏವಿಯನ್ ಸೋಂಕು ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಣೆ ಬಂದ್ ಮಾಡಲಾಗಿದ್ದು, ಕೇವಲ ಪ್ರಾಣಿ ವೀಕ್ಷಣೆಗೆ ಮಾತ್ರ ಅವಕಾಶ ನೀಡಿದೆ. ಜ್ಯೂನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮೃಗಾಲಯದ ಅಲ್ಲಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಚೈತ್ರಾ ಮೆಣಸಿನಕಾಯಿ, ವಲಯ ಅರಣ್ಯಧಿಕಾರಿ
ಪ್ರತಿವರ್ಷ ಸಂಕ್ರಾಂತಿ ದಿವಸ ಎಲ್ಲಿಗಾದ್ರೂ ಪ್ರವಾಸಕ್ಕೆ ಹೋಗ್ತಿದ್ವಿ. ಆದ್ರೆ, ಈ ಬಾರಿ ಕೊರೊನಾ ಸಲುವಾಗಿ ಎಲ್ಲಿಯೂ ಹೋಗಿಲ್ಲ. ನಮ್ಮದೇ ಜಿಲ್ಲೆಯ ಬಿಂಕದಕಟ್ಟಿ ಜ್ಯೂ ನೋಡಾಕ ಬಂದಿದ್ದು, ಬಹಳ ಖುಷಿಯಾಗೈತ್ರಿ.
ಪೂರ್ಣಿಮಾ, ಪ್ರವಾಸಿಗರು
ಮೃಗಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ದಿನಕ್ಕಿಂತ ಹೆಚ್ಚು ದುಡಿಮೆಯಾಗುತ್ತಿದೆ. ಇನ್ನೊಂದೆಡೆ, ಬೇರೆಡೆ ಹೋಗಲು ಬಾಡಿಗೆಗಳು ಬರುತ್ತಿವೆ. ಆದ್ರೆ, ಎಲ್ಲ್ಲಿ ದುಡಿಯೋದು ಎಂಬ ಗೊಂದಲವಿದೆ.
ಮಂಜು, ಆಟೋ ಚಾಲಕ