ವಿಜಯಸಾಕ್ಷಿ ಸುದ್ದಿ, ನವದೆಹಲಿ
ಸಂಪುಟ ರಚನೆ ವಿಚಾರವಾಗಿ ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದೇನೆ. ಮಧ್ಯಾಹ್ನದೊಳಗೆ ಲಿಸ್ಟ್ ಬರುತ್ತೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ನನಗಿನ್ನೂ ಯಾವುದೇ ಕರೆ ಬಂದಿಲ್ಲ. ಸೂಚನೆ ಬಂದ ಕೂಡಲೇ ಸಚಿವರ ಪಟ್ಟಿ ಬಗ್ಗೆ ಚರ್ಚಿಸುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಬೊಮ್ಮಾಯಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಭೇಟಿ ವೇಳೆ ಯಾವುದೇ ಚರ್ಚೆಯಾಗಿಲ್ಲ. ವರಿಷ್ಠರ ಸೂಚನೆಯಂತೆ ಸಂಪುಟ ರಚನೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಬೆಂಗಳೂರಿಗೆ ವಾಪಸ್ ಬರಲಿದ್ದು, ಬಳಿಕ ಕೋವಿಡ್ ಕುರಿತು ಎರಡು ಸಭೆ ನಡೆಸುತ್ತೇನೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೊಮ್ಮೆ 8 ಜಿಲ್ಲೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಸೂಚಿಸಲಾಗುವುದು. ಇನ್ನೊಂದು ಸಭೆಯಲ್ಲಿ ಲಸಿಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ವಿಚಾರವಾಗಿ ಚರ್ಚಿಸಲಾಗುವುದು ಎಂದರು.
ಈವರೆಗೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದವರನ್ನು ತಪಾಸಣೆ ನಡೆಸಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಇನ್ಮುಂದೆ ರೈಲ್ವೆ ಮಾರ್ಗಗಳಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗುವುದು ಎಂದು ಸಿಎಂ ತಿಳಿಸಿದರು.