ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಜಾನುವಾರುಗಳಿಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ, ಹೆಚ್ಚುವರಿ ಪ್ರಭಾರಿ ಇಒಗಳ ನಿಯೋಜನೆ ರದ್ದುಪಡಿಸುವಂತೆ ಸಚಿವ ಪ್ರಭು ಚವ್ಹಾಣ ಸೂಚನೆ
ದುರಗಪ್ಪ ಹೊಸಮನಿ:
ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 259 ವಿವಿಧ ಹುದ್ದೆಗಳು ಖಾಲಿ ಇವೆ. ಹೀಗಾಗಿ ಇಲಾಖಾಧಿಕಾರಿಗಳು ಅನಿವಾರ್ಯವಾಗಿ ಇರುವಷ್ಟು ವೈದ್ಯಾಧಿಕಾರಿಗಳ, ಸಿಬ್ಬಂದಿಯ ಮೂಲಕ ಬಂಡಿ ಸಾಗಿಸುತ್ತಿದ್ದಾರೆ. ಆದರೆ, ವೈದ್ಯಾಧಿಕಾರಿಗಳ, ಸಿಬ್ಬಂದಿಯ ಕೊರತೆಯಿಂದಾಗಿ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಗದಗ ತಾಲೂಕು ಹೊಂಬಳ ಗ್ರಾಮದ ಪಶುಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಚ್.ಎಸ್. ಜಿನಗಾ 7-8 ವರ್ಷಗಳಿಂದ ಗದಗ ತಾ.ಪಂ. ಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ, ಶಿರಹಟ್ಟಿ ತಾಪಂ ಇಒ ಆಗಿ ಡಾ. ಎನ್.ಎಚ್. ಓಲೇಕಾರ ಹಾಗೂ ಲಕ್ಷ್ಮೇಶ್ವರ ತಾಪಂ ಇಒ ಆಗಿ ಡಾ. ಆರ್.ವೈ. ಗುರಿಕಾರ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪಶುವೈದ್ಯಾಧಿಕಾರಿಗಳ, ಸಿಬ್ಬಂದಿಯ ಕೊರತೆಯಿದ್ದರೂ ಹೆಚ್ಚುವರಿ ಪ್ರಭಾರದಲ್ಲಿ ಪಶುಸಂಗೋಪನಾ ಇಲಾಖೆಯ ಸಂಬಳ ಪಡೆದು ಗದಗ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿ ಮೂವರು ಪಶುವೈದ್ಯಾಧಿಕಾರಿಗಳು ಕಳೆದ ಹಲವು ವರ್ಷಗಳಿಂದ ‘ತಾತ್ಕಾಲಿಕ’ ಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಮೂವರು ಎರಡೂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಆಯಾ ತಾಲೂಕು ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿದಾಯಕ ಕೆಲಸಗಳೂ ಆಗಿಲ್ಲ. ಅದರಲ್ಲೂ ಗದಗ ತಾ.ಪಂ. ಇಒ ಕಾಂಗ್ರೆಸ್ ಪಕ್ಷದ ಏಜೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳು ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ 82 ಪಶು ಚಿಕಿತ್ಸಾಲಯಗಳಿವೆ. ಅದರಲ್ಲಿ ಪಾಲಿಕ್ಲಿನಿಕ್ 1, ಪಶುಚಿಕಿತ್ಸಾಲಯ 62, ಪ್ರಥಮಿಕ ಪಶು ಚಿಕಿತ್ಸಾಲಯ 8, ತಾಲೂಕು ಪಶುಚಿಕಿತ್ಸಾಲಯಗಳು 7 ಹಾಗೂ 5 ಸಂಚಾರಿ ಪಶು ಚಿಕಿತ್ಸಾಲಯಗಳಿವೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಗುರುರಾಜ ಮನಗೂಳಿ ತಿಳಿಸಿದ್ದಾರೆ.
259 ಹುದ್ದೆಗಳು ಖಾಲಿ
ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ‘ಎ ವೃಂದದ ಮುಖ್ಯ ಪಶುವೈದ್ಯಾಧಿಕಾರಿ ಆಡಳಿತ 1, ಹಿರಿಯ ಪಶುವೈದ್ಯಾಧಿಕಾರಿಗಳು 13, ಪಶುವೈದ್ಯಾಧಿಕಾರಿ 49, ‘ಬಿ ವೃಂದದ ಜಾನುವಾರು ಅಭಿವೃದ್ಧಿ ಅಧಿಕಾರಿ 5, ‘ಸಿ ವೃಂದದ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು 8, ಪಶು ವೈದ್ಯಕೀಯ ಪರೀಕ್ಷಕರು 34, ಕಿರಿಯ ಪಶು ವೈದ್ಯಕೀಯ ಪರೀಕ್ಷಕರು 15, ಬೆರಳಚ್ಚುಗಾರರು 1, ವಾಹನ ಚಾಲಕರು 6, ಲ್ಯಾಬ್ ಟೆಕ್ನಿಷಿಯನ್ 1 ಹಾಗೂ ‘ಡಿ ವೃಂದದ 126 ಅನುಚರ ಸೇರಿ ಒಟ್ಟು 259 ಹುದ್ದೆಗಳು ಖಾಲಿ ಇವೆ.
ಪ್ರಭಾರ ಇಒಗಳ ನಿಯೋಜನೆ ರದ್ದುಪಡಿಸಿ
ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿ ಇಲಾಖೆಯ ಪಶುವೈದ್ಯಾಧಿಕಾರಿಗಳು ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಇಲಾಖೆಯ ಚಟುವಟಿಕೆಗಳು ಕುಂಠಿತವಾಗಿವೆ. ಜಾನುವಾರುಗಳ ದೈನಂದಿನ ಚಿಕಿತ್ಸೆಗೆ ಅನಾನುಕೂಲವಾಗುತ್ತಿದೆ ಎಂದು ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಪಶುವೈದ್ಯಾಧಿಕಾರಿಗಳ ನಿಯೋಜನೆಯನ್ನು ಕೂಡಲೇ ರದ್ದುಪಡಿಸಿ ಕೈಗೊಂಡ ಕ್ರಮದ ವಿವರವನ್ನು ಪಶುಸಂಗೋಪನಾ ಕಚೇರಿಗೆ ಸಲ್ಲಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಜಿ.ಪಂ. ಸಿಇಒ ಭರತ್ ಎಸ್. ಅವರಿಗೆ ಡಿ. 14ರಂದು ಸೂಚಿಸಿದ್ದಾರೆ.

ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯಲಿಕ್ಕೆ ಬಂದಿದೆ. ಈ ವೇಳೆ ತಾ.ಪಂ. ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಮೊತ್ತದ ಕೆಲಸಗಳು ನಡೆಯುತ್ತಿರುವುದರಿಂದ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಕಾಯುತ್ತಿದ್ದೇವೆ. ಆರ್ಥಿಕ ವರ್ಷ ಮುಕ್ತಾಯದ ಬಳಿಕ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಒಗಳ ನಿಯೋಜನೆಯನ್ನು ಬಹುತೇಕ ರದ್ದುಗೊಳಿಸಲಾಗುವುದು.
ಭರತ್ ಎಸ್., ಜಿಪಂ ಸಿಇಒ
ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೈದ್ಯಾಧಿಕಾರಿ, ಸಿಬ್ಬಂದಿಯ ಕೊರತೆಯಿಂದಾಗಿ ಸೊರಗಿದೆ. ಇದರಿಂದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ತಾಪಂಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯಕೀಯ ಕ್ಷೇತ್ರದಲ್ಲಿ ಪಳಗಿರುವ ಮೂವರು ಇಒಗಳ ನಿಯೋಜನೆಯನ್ನು ಜಿಪಂ ಸಿಇಒ ಅವರು ಶೀಘ್ರವೇ ರದ್ದುಗೊಳಿಸಬೇಕು.
ರವಿ ವಗ್ಗನವರ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ತಾಲ್ಲೂಕಾಧ್ಯಕ್ಷ
ಪಶು ವೈದ್ಯಾಧಿಕಾರಿಗಳ ಕೊರತೆ ಇರುವುದರಿಂದ ಮೂರು-ನಾಲ್ಕು ಕಡೆಗಳಲ್ಲಿ ಒಬ್ಬರನ್ನೇ ನಿಯೋಜಿಸಲಾಗಿದೆ. ಶೀಘ್ರದಲ್ಲೇ ೪೫೮ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಗದಗ ಜಿಲ್ಲೆಗೆ ಏಪ್ರಿಲ್, ಮೇ ವೇಳೆಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಇಲಾಖಾ ಸಚಿವರು ತಿಳಿಸಿದ್ದಾರೆ. ೨೫ ಸಿಬ್ಬಂದಿಯನ್ನು ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು.
ಡಾ. ಗುರುರಾಜ ಮನಗೂಳಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ, ಗದಗ