ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡದೇ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸಬೇಕು. ಜಿಲ್ಲೆಯಲ್ಲಿ ಅವಧಿ ಮೀರಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಚಾರಣೆ ನಡೆಸಿ, ತ್ವರಿತವಾಗಿ ಇತ್ಯರ್ಥಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿನಾಕಾರಣ ತಿರಸ್ಕರಿಸಬೇಡಿ
ಸಕಾಲ ಸೇವೆಯನ್ನು ನಾಗರಿಕರಿಗೆ ಸಮಯಬದ್ಧವಾಗಿ ನೀಡಿ, ಸಮರ್ಪಕವಾಗಿ ಅನು?ನಗೊಳಿಸಬೇಕು. ಸಕಾಲದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ವಿನಾಕಾರಣ ಅಥವಾ ಉದ್ದೇಶಪೂರಿತವಾಗಿ ತಿರಸ್ಕೃತಗೊಳಿಸಬಾರದು. ನಿಗದಿತ ಅವಧಿಯೊಳಗೆ ಅರ್ಜಿಗಳ ವಿಲೇವಾರಿ ಆಗುವಂತೆ ಕ್ರಮ ವಹಿಸಬೇಕು ಎಂದರು.
ಸಕಾಲ ಸೇವೆಯಲ್ಲಿ ತಾಂತ್ರಿಕ ದೋ?ಗಳು ಉದ್ಭವಿಸಿದಲ್ಲಿ ಸಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಕಾಲ ಸೇವೆ ಒದಗಿಸುತ್ತಿರುವ ಇಲಾಖೆಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಪ್ರತಿನಿತ್ಯ ಅಧಿಕಾರಿಗಳು ಕಚೇರಿಗೆ ಹಾಜರಾದ ತಕ್ಷಣ ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಸಕಾಲ ಸೇವೆ ನೀಡುತ್ತಿರುವ ಜಿಲ್ಲೆಯ ಎಲ್ಲ ಇಲಾಖೆಗಳು ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಚುರುಕಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಕಾಲ ಯೋಜನೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ೪೫ ಇಲಾಖೆಗಳಲ್ಲಿ ೫೨೪ ಸಕಾಲ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಸಕಾಲ ಅರ್ಜಿಗಳ ಸ್ವೀಕೃತಿಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ, ಕೆಲವು ಇಲಾಖೆಗಳಲ್ಲಿ ಶೂನ್ಯ ಅರ್ಜಿಗಳ ಸ್ವೀಕೃತಿ ಆಗಿರುವ ಬಗ್ಗೆ ಗಮನಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಚೇರಿಗಳಿಗೆ ಭೇಟಿ ನೀಡಿ, ಸಕಾಲದಡಿ ಶೂನ್ಯ ಸ್ವೀಕೃತಿಗೆ ಕಾರಣಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.
ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಬೆಳೆಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೈಗೊಂಡಿರುವ ಜಂಟಿ ಬೆಳೆ ಸಮೀಕ್ಷೆ ಕಾರ್ಯ ಶೀಘ್ರವೇ ಪೂರ್ಣಗೊಳಿಸಬೇಕು. ಬೆಳೆ ಮತ್ತು ಮನೆ ಹಾನಿ ಆಗಿರುವ ಕುರಿತು ವರದಿ ಸಲ್ಲಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಮಳೆ ಪ್ರಮಾಣ ಕಡಿಮೆ ಆದನಂತರ ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ಥಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ. ಕಲ್ಲೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ.ಎಲ್. ಬಾರಾಟಕ್ಕೆ, ವಯಸ್ಕರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.