- ಜನಾಶೀರ್ವಾದ ಯಾತ್ರೆ ವೇಳೆ ಎ. ನಾರಾಯಾಣಸ್ವಾಮಿ ಯಡವಟ್ಟು
ವಿಜಯಸಾಕ್ಷಿ ಸುದ್ದಿ, ಗದಗ
ಮೃತಪಟ್ಟ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಕರ್ತವ್ಯನಿರತ ಸೈನಿಕನ ಮನೆಗೆ ತೆರಳಿ ಸಾಂತ್ವನ ಹೇಳುವ ಮೂಲಕ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಯಡವಟ್ಟು ಮಾಡಿದ್ದಾರೆ.
ನಿನ್ನೆ ಗದಗನಲ್ಲಿ ವಿಠಲಾರೂಢ ಸಮುದಾಯ ಭವನದಲ್ಲಿ ಜನಾಶೀರ್ವಾದ ಯಾತ್ರೆ ಅಭಿನಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಚಿವರು ಹಾವೇರಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಮುಗಿಸಿ ಗದಗ ನಗರಕ್ಕೆ ಆಗಮಿಸುತ್ತಿದ್ದರು.
ಈ ವೇಳೆ ಮಾರ್ಗಮಧ್ಯ ಬಿಜೆಪಿ ಸರಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಮಾಗಡಿ ಹಾಗೂ ಮುಳಗುಂದ ಪಟ್ಟಣದಲ್ಲಿ ಜನರೊಂದಿಗೆ ಕೆಲ ಕಾಲ ಕಳೆದಿದ್ದರು.
ಜೊತೆಗೆ ಮುಳಗುಂದ ಪಟ್ಟಣದಲ್ಲಿ ಕಳೆದ ಒಂದು ವರ್ಷದ ಹಿಂದೆ ಬಸವರಾಜ ಹಿರೇಮಠ ಎಂಬುವವರು ಪುಣೆಯಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಳಿಕ ಅವರಿಗೆ ಸರಕಾರದಿಂದ ಸಿಗುವ ಪರಿಹಾರದ ಭರವಸೆ ನೀಡಲು ನಿರ್ಧರಿಸಲಾಗಿತ್ತು.
ಆದರೆ ಮೃತ ಯೋಧನ ಮನೆಗೆ ಭೇಟಿ ನೀಡುವ ಬದಲು ಜಮ್ಮು-ಕಾಶ್ಮೀರದಲ್ಲಿ ಸದ್ಯ ಕರ್ತವ್ಯದಲ್ಲಿರುವ ಯೋಧ ರವಿಕುಮಾರ ಕಟ್ಟಿಮನಿ ಎಂಬುವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಆತನ ಪತ್ನಿಗೆ ಸರಕಾರಿ ನೌಕರಿ ಮತ್ತು ಜಮೀನು ಕೊಡಿಸುವ ಭರವಸೆ ನೀಡಿದ್ದಾರೆ.
ಈ ಹೇಳಿಕೆಯಿಂದ ಯೋಧನ ಕುಡುಂಬಸ್ಥರು ತಬ್ಬಿಬ್ಬುಗೊಂಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಾರ್ಯಕರ್ತನೊಬ್ಬ ಕರ್ತವ್ಯದಲ್ಲಿದ್ದ ಯೋಧ ರವಿಕುಮಾರನಿಗೆ ವಿಡಿಯೋ ಕರೆ ಮಾಡಿ ಸಚಿವರ ಜೊತೆಗೆ ಮಾತನಾಡಲು ಕೊಟ್ಟಿದ್ದಾರೆ.
ಇದರಿಂದ ಸಚಿವರು ಮತ್ತು ಮನೆಯವರು ಇಬ್ಬರೂ ವಿಚಲಿತರಾಗಿ ತಬ್ಬಿಬ್ಬಾಗಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ ಅಲ್ಲಿಂದ ಸಚಿವರು ತೆರಳಿ ನೇರವಾಗಿ ಗದಗ ಕಡೆ ಮುಖಮಾಡಿದರು. ಈ ಘಟನೆ ಸಚಿವರಿಗೆ ತೀವ್ರ ಮುಜುಗರಕ್ಕೆ ಕಾರಣವಾಯಿತು.