
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ಚರ್ಚೆ ನಡೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಚಿವ ಸಂಪುಟ ವಿಸ್ತರಣೆಯೂ ಆಗಲ್ಲ, ಪುನರ್ರಚನೆಯೂ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಮಾಧ್ಯಮಗಳ ಊಹಾಪೋಹವಷ್ಟೇ. ಸರಕಾರ ಸುಭದ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಚಿವ ಸಂಪುಟದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಕೊಪ್ಪಳ ತಾಲೂಕಿನಲ್ಲಿ ಅನುಷ್ಠಾನಗೊಳಿಸುವ ಕುರಿತು ಸರಕಾರ ಇಚ್ಛಾಶಕ್ತಿ ತೋರಿದೆ. ಈ ಬಗ್ಗೆ ಹಲವು ಪ್ರಕಾರಗಳ ಅಧ್ಯಯನ ನಡೆಸುವ ಕುರಿತು ಚಿಂತನೆ ಇದೆ. ಹನಿ ನೀರಾವರಿ ಬದಲಿಗೆ ಸಮಗ್ರ ನೀರಾವರಿ ಬಗ್ಗೆ ಒಲವಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಣಯಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದು ವರ್ಷದಲ್ಲಿ ಸರಕಾರದ ಅವಧಿ ಮುಗಿಯಲಿದ್ದು, ಕಾಮಗಾರಿಗಳನ್ನು ಘೋಷಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಸಂದರ್ಭದಲ್ಲಿ ನಡಿಗೆ ಅಥವಾ ಪಾದಯಾತ್ರೆ ನಡೆಸಲು ನಮ್ಮದು ಕಾಂಗ್ರೆಸ್ ಅಲ್ಲ, ನಾವು ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದರು.