ಸಚಿವ ಹಾಲಪ್ಪ ಆಚಾರ್ ಅಳಿಯನಿಂದ ಭೂಕಬಳಿಕೆ: ಗ್ರಾಮಸ್ಥರ ಆರೋಪ

0
Spread the love

-ಸಮರ್ಪಕ ದಾಖಲೆ ನೀಡಿ ಪಡೆದರೆ ತಕರಾರಿಲ್ಲ: ಬಸವರಾಜ

Advertisement

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಇನಾಮು‌ ನೀಡಿದ ಜಮೀನನ್ನು ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿ, ಬಡವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಹನುಮಂತಪ್ಪ ಮದ್ಲೂರು ಆರೋಪಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಸರ್ವೇ ನಂಬರ್ 17ರಲ್ಲಿ 18.12 ಗುಂಟೆ ಜಮೀನುನನ್ನು ಕಳೆದ ಐವತ್ತು ವರ್ಷಗಳಿಂದ ನಾವು ಉಳಿಮೆ ಮಾಡಿಕೊಂಡು ಬಂದಿದ್ದು, ಈಗ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮದ ಹನುಮಂತಪ್ಪ ಮದ್ಲೂರು ತಿಳಿಸಿದರು.

ರಾಘವೇಂದ್ರ ಕಾಂತರಾಜ್ ಆಚಾರ್ ಎಂಬುವವರಿಂದ ನಮ್ಮ ತಂದೆ ಕಳಕಪ್ಪ ಜಮೀನು ಖರೀದಿಸಿದ್ದರು. ಇದರಲ್ಲಿ ನಾವು ಅನೇಕ ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದೇವೆ. ಇದು ಇನಾಂ ಜಮೀನು ಆಗಿದ್ದು, ಕಾನೂನು ಪ್ರಕಾರ ನಮಗೆ ಅವರು ಖರೀದಿ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ನಾವು ಅನಕ್ಷರಸ್ಥರಾಗಿರುವುದರಿಂದ ನಮ್ಮ ಮನೆತನದವರು ಪಹಣಿ ಪತ್ರ, ಮ್ಯೂಟೇಶನ್ ಮಾಡಿಸಿಕೊಂಡಿಲ್ಲ ಎಂದರು.

ಕಾಂತಾರಾಜ್ ಎಂಬುವವರಿಗೆ ರಮಾಬಾಯಿ ಎಂಬ ಪುತ್ರಿಯನ್ನು ಸೃಷ್ಟಿಸಿ ಅವರಿಂದ ಖರೀದಿ ಬರೆಸಿಕೊಂಡಿದ್ದಾರೆ. ತಕರಾರು ಇದ್ದ ಜಮೀನನ್ನು ಖರೀದಿಸಿದ್ದಾರೆ. ಅದು ಪಹಣಿ ಆಗಿದ್ದರೂ ಇನ್ನೂ ಮ್ಯೂಟೇಶನ್ ಆಗಿಲ್ಲ. ಆದ್ದರಿಂದ ಸಚಿವರ ಅಳಿಯ ಬಸವರಾಜ ಅವರು ಪ್ರಭಾವಿಗಳು, ಶ್ರೀಮಂತರಾಗಿರುವುದರಿಂದ ನಮ್ಮ ಕಬ್ಜಾ ಇರುವ ಜಮೀನನ್ನು ಖರೀದಿಸಿ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.

ಅಲ್ಲದೆ ಈ ವ್ಯಾಜ್ಯ ಜಿಲ್ಲಾ ನ್ಯಾಯಾಲಯದಲ್ಲಿದೆ. ಈ ಜಮೀನಿಗೆ ಸಂಬಂಧಿಸಿದ ಖರೀದಿ ಪತ್ರ, ಸಾಗುವಳಿ ಪತ್ರ, ಕಬ್ಜಾವತಿ ಸೇರಿದಂತೆ ಎಲ್ಲ ದಾಖಲೆಗಳು ಇವೆ. ಅಲ್ಲದೆ ನಾವೇ ಉಳಿಮೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈಗ ಸಮೀಪದಲ್ಲಿ ಗ್ರ್ಯಾನೈಟ್‌ ಗಣಿಗಾರಿಕೆ ನಡೆಯುತ್ತಿರುವುದರಿಂದ ಈ ಜಮೀನಿನ ಮೂಲಕ ಹಾಯ್ದು ಹೋಗಲು ಇಲ್ಲದವರನ್ನು ಸೃಷ್ಟಿ ಮಾಡಿ ಖರೀದಿ ಮಾಡಿದ್ದಾರೆ. ರಮಾಬಾಯಿ ಎನ್ನುವವರು ಗ್ರಾಮದಲ್ಲಿ ಯಾರೂ ಇಲ್ಲ ಎಂದರು.

ಇನಾಂ ಜಮೀನು ನಾವು ಸಾಗುವಳಿ ಮಾಡುತ್ತಿದ್ದಾಗ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಊಳುವವನೆ ಒಡೆಯ ಎಂಬ ಕಾನೂನು ಬಂದಾಗ ಜಮೀನಿನ ಸಂಪೂರ್ಣ ಹಕ್ಕು ನಮ್ಮದೇ ಇದೆ. 2018ರಲ್ಲಿ ಈ ಕುರಿತು ಅವರ ಸಂಬಂಧಿಕರೆಂದು ಹೇಳಿಕೊಂಡು ಕೊಪ್ಪಳ, ಹೊಸಪೇಟೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಆ ಜಮೀನು ಖರೀದಿಸಲು ನಮಗೆ ತಕರಾರು ಇದೆ ಎಂದರು.

ಗ್ರಾಮದ ಬಸವರಾಜ ಬೊಮ್ಮನಾಳ ಎಂಬುವವರು ಮಾತನಾಡಿ, ರೈತರು ಉಳಿಮೆ ಮಾಡುತ್ತಿರುವ ಈ ಜಮೀನನ್ನು ಸಮೀಪದಲ್ಲಿಯೇ ಗಣಿಗಾರಿಕೆ ನಡೆಸುತ್ತಿರುವ ಸಚಿವ ಹಾಲಪ್ಪ ಆಚಾರ ಅವರ ಅಳಿಯ ಬಸವರಾಜ ರಾಜೂರು ಎಂಬುವವರು ಖರೀದಿಸಿದ್ದಾರೆ. ಈ ಜಮೀನಿನ ಮೂಲಕ ಹಾಯ್ದು ಹೋಗಲು ಸರಳವಾಗುತ್ತಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಖರೀದಿಸಿದ್ದಾರೆ ಎಂದು ಆರೋಪಿಸಿದರು.

ದಶಕಗಳಿಂದ ಉಳಿಮೆ ಮಾಡುತ್ತಾ ಬಂದಿರುವ ನಮ್ಮ ಜಮೀನನ್ನು ಬಸವರಾಜ ರಾಜೂರು (ಗೌರಾ ಬಸವರಾಜ) ಎಂಬುವರು ಖರೀದಿಸಿದ್ದು, ಬಡವರ ಜಮೀನು ಕಿತ್ತುಕೊಳ್ಳಲು ಮಾಡಿರುವ ಹುನ್ನಾರ ಇದು.
ಹನಮಂತಪ್ಪ ಮುದ್ಲಾಪುರ, ವಜ್ರಬಂಡಿ ಗ್ರಾಮಸ್ಥ

ಸಚಿವ ಹಾಲಪ್ಪ ಆಚಾರ್ ಅವರ ಹೆಸರನ್ನು ಈ ವಿಷಯಕ್ಕೆ ತಳುಕು ಹಾಕುವುದು ಸಮಂಜಸವಲ್ಲ. ನಾನು ವ್ಯವಹಾರಸ್ಥ. ನನಗೆ ನನ್ನದೇ ಆದ ಐಡೆಂಟಿಟಿ‌ ಇದೆ. ರಮಾಬಾಯಿ ಎಂಬುವವರಿಗೆ ಸೇರಿದ ಜಮೀನನ್ನು ದಾಖಲೆ ನೋಡಿ, ವಕೀಲರ ಸಲಹೆ ಪಡೆದು ಖರೀದಿಸಿದ್ದೇನೆ. ಈ ಜಮೀನಿಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ನೀಡಿದರೆ ಅವರೇ ಪಡೆದುಕೊಳ್ಳಲಿ. ಇದಕ್ಕೆ ನಮ್ಮ ತಕರಾರೇನಿಲ್ಲ.
-ಬಸವರಾಜ ರಾಜೂರು, ಜಮೀನು ಖರೀದಿದಾರ.


Spread the love

LEAVE A REPLY

Please enter your comment!
Please enter your name here