ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಜಗದೀಶ ನಗರದ ಶಂಕರಪ್ಪ ಕಟ್ಟಿಮನಿ (45) ಎಂದು ಗುರುತಿಸಲಾಗಿದೆ.
ಕೂಲಿ ಕಾರ್ಮಿಕರಾಗಿದ್ದ ಶಂಕರಪ್ಪ, ನಿನ್ನೆ ಮಧ್ಯಾಹ್ನದ ವೇಳೆ ಮನೆ ಸಮೀಪದ ರೇಣುಕಾ ದೇವಸ್ಥಾನ ಎದುರಿಗೆ ಇರುವ ನಾಲೆಗೆ ಕಸ ಎಸೆಯಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಆಯತಪ್ಪಿ ನಾಲೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳೀಯರ ನೆರವಿನಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. 3 ಗಂಟೆ ಸುಮಾರಿಗೆ ಹೆಗ್ಗೇರಿ ಸ್ಮಶಾನದ ಬಳಿ ಇರುವ ರಸ್ತೆ ಸೇತುವೆ ಬಳಿ ಹತ್ತಿರ ಮೃತ ಸ್ಥಿತಿಯಲ್ಲಿ ಶಂಕರಪ್ಪ ಪತ್ತೆಯಾಗಿದ್ದಾರೆ.
ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಜೋರಾಗಿದ್ದರಿಂದ ಸೇತುವೆ ತನಕ ಕೊಚ್ಚಿಕೊಂಡು ಹೋಗಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದ್ದಾರೆ. ಶಂಕರಪ್ಪ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ, ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.