ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಕೊರೊನಾ ಸೋಂಕಿತ ವ್ಯಕ್ತಿ ದರ್ಪ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಾನು ಸತ್ತರೆ ಸಾಯುತ್ತೇನೆ. ನಿಮಗೇನು ಕಷ್ಟ? ನನ್ನ ತೋಟಕ್ಕೆ ನೀವು ಗೊಬ್ಬರ ಹಾಕಲು ನೀವು ಬರುತ್ತೀರಾ? ಎಂದು ಸೋಂಕಿತ ವ್ಯಕ್ತಿ ದರ್ಪ ಮೆರೆದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ.
ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಇದ್ದರು. ಆದರೂ ಹೊರಗಡೆ ತಿರುಗಾಟ ನಡೆಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದಾರೆ. ಆದರೆ, ಆ ವ್ಯಕ್ತಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ಅಲ್ಲದೇ, ಪ್ರಶ್ನೆ ಮಾಡಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ತಾಲೂಕಿನ ನೆರಡಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿರುವುದು ಬಿಟ್ಟು ಹೊರಗೆ ಏಕೆ ಹೋಗಿದ್ದೀರಾ? ಎಂದು ಅಧಿಕಾರಗಳು ಪ್ರಶ್ನಿಸಿದ್ದರು. ಆಗ ನನ್ನಿಂದ ಯಾರಿಗೆ ತೊಂದರೆಯಾಗಿದೆ ಹೇಳಿ? ನಾನು ಹೊರಗಡೆ ಓಡಾಡುತ್ತೇನೆ ಅದನ್ನು ನೀವು ಕೇಳಬಾರದು ಎಂದು ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾನೆ. ಸದ್ಯ ಸೋಂಕಿತ ವ್ಯಕ್ತಿಯ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.