ಸರ್ಕಾರಿ ಕಟ್ಟಡದಲ್ಲಿ ಫಂಡ್ ರೀತಿಯಲ್ಲಿ ಜೂಜಾಟ: ಬ್ಯಾಂಕ್ ನೌಕರ, ಉದ್ಯಮಿಗಳು ಸೇರಿದಂತೆ ಒಂಬತ್ತು ಜನರ ಬಂಧನ

0
Spread the love

ಆರೋಪಿತರಿಂದ ಆರು ಬೈಕ್, 89,980 ರೂ. ನಗದು ವಶಕ್ಕೆ

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೈರಾಪೂರ ಗ್ರಾಮದ ಪ್ರವಾಸಿ ಮಂದಿರದ ಕೆಳಗಿನ ಕೊಠಡಿಯಲ್ಲಿ ಬ್ಯಾಂಕ್ ನೌಕರ, ಇಬ್ಬರು ಉದ್ಯಮಿಗಳು ಸೇರಿದಂತೆ ಫಂಡ್ ರೀತಿಯಲ್ಲಿ ಇಸ್ಟೀಟು ಜೂಜಾಟ ಆಡುತ್ತಿದ್ದ ಒಂಬತ್ತು ಜನರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿ ಅವರಿಂದ ಲಕ್ಷಾಂತರ ರೂ, ನಗದು, ಮೊಬೈಲ್, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರಿಂದ 89,980 ರೂ. ನಗದು, 63 ಸಾವಿರ ರೂ. ಮೌಲ್ಯದ ಆರು ಬೈಕ್‌ಗಳು ಸೇರಿ ಒಟ್ಟು 1,61,030 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅದರಲ್ಲಿ ವಿವಿಧ ಕಂಪನಿಯ ಒಟ್ಟು 8050 ರೂ. ಮೌಲ್ಯದ ಒಂಬತ್ತು ಮೊಬೈಲ್ ಫೋನ್‌ಗಳು, ತಲಾ 10 ಸಾವಿರ ರೂ. ಮೌಲ್ಯದ ಬಜಾಜ್, ಹೀರೋ ಎಚ್‌ಎಫ್ ಡಿಲಕ್ಸ್ ಹಾಗೂ ಹೀರೋ ಹೊಂಡಾ ಫ್ಯಾಶನ್ ಪ್ರೋ ಕಂಪನಿಯ ಎರಡು ಬೈಕ್, ಎಂಟು ಸಾವಿರ ರೂ. ಮೌಲ್ಯದ ಜುಪಿಟರ್ ಕಂಪನಿಯ ಸ್ಕೂಟರ್, 15 ಸಾವಿರ ರೂ. ವೆಚ್ಚದ ಹೊಂಡಾ ಶೈನ್ ಕಂಪನಿಯ ಬೈಕ್ ಸೇರಿ ಆರು ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಸ್ಟೀಟು ಜೂಜಾಟ ಆಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದ ಶಿವಪ್ಪ ಸಂಗಪ್ಪ ರಗಟಿ, ಗಜೇಂದ್ರಗಡ ತಾಲೂಕಿನ ಜಿಗೇರಿ ನಿವಾಸಿ ಮುತ್ತಪ್ಪ ಮಲ್ಲಪ್ಪ ಕೊಪ್ಪಳ, ಗಜೇಂದ್ರಗಡ ಪಟ್ಟಣದ ಶಿವಾಜಿ ಭೀಮಪ್ಪ ಹಾಳಕೇರಿ(ಹೋಟೆಲ್ ಕೆಲಸಗಾರ), ದಾವಲಸಾಬ ಹುಸೇನಸಾಬ ಡಾಲಯತ್(ಚಾಲಕ), ಮುರಳಿಧರ್ ದತ್ತಾಜಿರಾವ್ ಸಿಂಧೆ(ಉದ್ಯಮಿ), ರಮೇಶ ಬಸಪ್ಪ ಕೋಟೆ(ಬ್ಯಾಂಕ್ ನೌಕರ), ಕುಮಾರ ಮಹಾಂತಪ್ಪ ಮರದ(ವೆಲ್ಡರ್), ವೆಂಕಟೇಶ್ ಕರಿಯಪ್ಪ ಮುದಗಲ್ ಹಾಗೂ ವೆಂಕಟೇಶ್ ತಿಮ್ಮಪ್ಪ ಮುದಗಲ್(ಉದ್ಯಮಿ) ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗಜೇಂದ್ರಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಗಜೇಂದ್ರಗಡ ಸುತ್ತಮುತ್ತಲಿನ ಹಳ್ಳಕೊಳ್ಳದಲ್ಲಿ ಫಂಡ್ ರೀತಿಯಲ್ಲಿ ಇಸ್ಪೀಟು ಜೂಜಾಟಗಳ ಅಡ್ಡೆಗಳು ತಲೆಯತ್ತಿದ್ದರೂ, ಪೊಲೀಸರು ದಾಳಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಸದ್ಯ ಈಗಲಾದರೂ ಇಸ್ಟೀಟು ಅಡ್ಡೆಯ ಮೇಲೆ ದಾಳಿ ಮಾಡಿದ್ದು, ಸಂತಸ ತಂದಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here