ವಿಜಯಸಾಕ್ಷಿ ಸುದ್ದಿ, ಗದಗ
ಆರನೇ ವೇತನ ಜಾರಿ ಅಥವಾ ಸಮನಾಂತರ ವೇತನ ನೀಡುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್’ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಗದಗ ಕೇಂದ್ರೀಯ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಸ್’ಗಳು, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಇನ್ನು ಬಸ್ ಇಲ್ಲದ್ದಕ್ಕೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಬೆಂಗಳೂರಿನಿಂದ ಗದಗ ನಗರಕ್ಕೆ ಬಂದಿದ್ದ ಗರ್ಭಿಣಿ ಮಹಿಳೆ, ಚಿಕ್ಕಮಗು ಹಾಗೂ ಓರ್ವ ಯುವತಿ ಅಣ್ಣಿಗೇರಿಗೆ ಹೋಗಲು ಬಸ್ ಸಂಚಾರವಿಲ್ಲದೇ ಪರದಾಡಿದರು.
ಬಳಿಕ ಬಸ್ ಇಲ್ಲದ್ದಕ್ಕೆ ಮತ್ತು ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ಕೊಡಲಾಗದೇ ಒಂದೇ ಬೈಕ್’ನಲ್ಲಿ ಮಗು ಸಹಿತ ನಾಲ್ಕು ಜನ ಪ್ರಯಾಣಿಸಿದ ಪ್ರಸಂಗ ನಡೆಯಿತು.
ಬಸ್ ಬಂದಿದ್ದರೂ ಕಾಲೇಜುಗಳು ಪ್ರಾರಂಭ ಇವೆ. ಹೀಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲಾಗದೇ ಗೋಳಾಡಿದರು.
ಜಿಮ್ಸ್ ನರ್ಸಿಂಗ್ ಕಾಲೇಜ್ ಗೆ ಹೋಗಲು ಬಸ್ ಇಲ್ಲದೇ ವಿದ್ಯಾರ್ಥಿಗಳು ಪರದಾಟ ನಡೆಸಿದರು. ವಿದ್ಯಾರ್ಥಿಗಳಿಗಾದರೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು. ಕೆಲ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಕಾರಣದಿಂದಾಗಿ ಕಾಲೇಜ್’ಗೆ ಹೋಗಲಾಗದೇ ವಾಪಸ್ ಹಾಸ್ಟೆಲ್’ಗೆ ತೆರಳಿದರು.
ನಿನ್ನೆ ರಾತ್ರಿ ತಮ್ಮೂರಿಗೆ ಹೋಗಲು ವಸತಿ ಬಸ್ ಬರದಿದ್ದಕ್ಕೆ ಕೆಲವು ಪ್ರಯಾಣಿಕರು ನಿಲ್ದಾಣದಲ್ಲೇ ಮಲಗಿಕೊಂಡು ದಿನ ಕಳೆದು ಬೆಳಿಗ್ಗೆ ಖಾಸಗಿ ವಾಹನ ಹಿಡಿದು ತಮ್ಮೂರಿಗೆ ತೆರಳುತ್ತಿದ್ದಾರೆ.