ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಗದಗನ ವೀರನಾರಾಯಣ ಗುಡಿ ಬಳಿಯ ನಿವಾಸಿ ಸಂಜಯ್ ಕೊಪ್ಪದ (23), ನರಗುಂದದ ಸಂಜು ಚಲವಾದಿ (23) ಬಂಧಿತ ಆರೋಪಿಗಳು.

ನಗರದ ಆರ್ ಟಿಒ ಕಚೇರಿ ಹೊರವಲಯದ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಭೀಮೇಶ್ ಹುಗ್ಗಿ ಎಂಬುವರನ್ನು ತಡೆದು ದಾಖಲೆಗಳನ್ನು ಪರಿಶೀಲನೆಗೆ ಕೇಳಿದ್ದಾರೆ. ದಾಖಲೆ ಇಲ್ಲವೆಂದ ಮೇಲೆ ದಂಡ ಕಟ್ಟಬೇಕು ಇಲ್ಲವೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೇಳಿದ್ದಾರೆ.
ಆದರೆ ದಂಡ ಕಟ್ಟಲು ಹಣ ಇಲ್ಲ ಎಂದಾಗ ಕಪಾಳಕ್ಕೆ ಹೊಡೆದು ಜೇಬು ಪರಿಶೀಲಿಸಿ ಒಂದು ಸಾವಿರ ರೂ.ನಗದು, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ, ಎಟಿಎಂ ಕಾರ್ಡ್ ಪಡೆದು ನಂತರ, ಅದರ ಪಾಸ್‍ವರ್ಡ್ ಕೇಳಿ, ಬ್ಯಾಂಕ್ ಖಾತೆಯಲ್ಲಿನ ರೂ. 1,500 ರೂ. ಡ್ರಾ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 15 ರಂದು ಪ್ರಕರಣ ದಾಖಲಾಗಿತ್ತು
ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸೈ ಲಕ್ಕಪ್ಪ ಅಗ್ನಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ವೇಳೆಯಲ್ಲಿ ನಗರದ ಹೊರವಲಯದಲ್ಲಿ ಸಾರ್ವಜನಿಕರನ್ನು ತಡೆದು ಪೊಲೀಸ್ ಎಂದು ಬೆದರಿಸಿ ಹಣಕೀಳುವ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಗದಗ ನಗರ, ಗ್ರಾಮೀಣ, ಅಣ್ಣಿಗೇರಿ, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.