ವಿಜಯಸಾಕ್ಷಿ ಸುದ್ದಿ, ಮೈಸೂರು
ನಾನು ಹತ್ತು ದಾಖಲೆಗಳ ಸಮೇತ ಗಂಭೀರ ಆರೋಪ ಮಾಡುತ್ತ ಬಂದಿದ್ದೇನೆ. ಒಂದೇ ಒಂದು ಗುಂಟೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿದರೆ ನಾನೆ ವರ್ಗಾವಣೆ ರದ್ದು ಮಾಡಿ ಎಂದು ಮನವಿ ಮಾಡುತ್ತೇನೆ. ಈಗಲೂ ನಿಮ್ಮ ಬಳಿ ಏನಿದೆ ಸರ್ಕಾರಕ್ಕೆ ವರದಿ ಕೊಡಿ ಎಂದು ಶಾಸಕ ಸಾ.ರಾ. ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರೋಹಿಣಿ ವರ್ಗಾವಣೆ ಬಗ್ಗೆ ಸಾ.ರಾ.ಮಹೇಶ್ ಕಾರಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯನ್ನು ಸರಿಯಾಗಿ ಮಾಡದ ಪರಿಣಾಮ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಮೈಸೂರಿನ ಬೆಳವಣಿಗೆಗಳ ಬಗ್ಗೆ ನೀವು ಯಾಕೆ ಧ್ವನಿ ಎತ್ತಲಿಲ್ಲ? ಮೈಸೂರು ಜಿಲ್ಲಾಧಿಕಾರಿಗೆ ಕಳಂಕ ತರಲು ಯತ್ನಿಸಿದ್ದಾರೆ ಎಂದು ಆರೋಪಿಸುತ್ತಿರಲ್ಲ, ರೋಹಿಣಿ ಕೈಗೊಂಡ ಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ನೀವು ಅಷ್ಟೊಂದು ಖಡಕ್ ಆಗಿದ್ದರೆ ವರ್ಗಾವಣೆ ಬಳಿಕವೂ ಸರ್ಕಾರಿ ಕಾರಿನಲ್ಲಿ ಹೋಗಿ ಸಿಎಂ ಭೇಟಿಯಾಗಿದ್ದು ಏಕೆ? ಶಿಲ್ಪಾ ನಾಗ್ ವರ್ಗಾವಣೆ ಆದ ಮೇಲೆ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಆದರೆ, ನೀವು ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇಲ್ಲೇ ಗೊತ್ತಾಗುತ್ತದೆ ನಿಮ್ಮ ನಡವಳಿಕೆ ಏನು ಎಂದು? ನೀವು ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಪ್ರಚಾರ ಪಡೆಯುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಆ ನಕಲಿ ಖಾತೆಗಳಲ್ಲಿಯೇ ಅಕ್ರಮ ಭೂ ಮಾಫಿಯಾ ದಾಖಲೆ ಬಿಡುಗಡೆ ಮಾಡಿ, ಕ್ಯಾಬಿನೆಟ್ ಸಚಿವರ ನಿವಾಸ ನವೀಕರಣಕ್ಕೆ ರೂ. 2 ಲಕ್ಷ ಮಾತ್ರ ಅನುದಾನ ಬರುತ್ತದೆ. ಆದರೆ, ರೂ. 65 ಲಕ್ಷ ವೆಚ್ಚದಲ್ಲಿ ಸ್ವಿಮ್ಮಿಂಗ್‌ಪೂಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಇಷ್ಟೊಂದು ಹಣ ಖರ್ಚು ಮಾಡಲು ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಅವರು, ಸ್ವಿಮ್ಮಿಂಗ್ ಮಾಡಲು ಕುಡಿಯುವ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಗೆ ಮೂರು ವಿದ್ಯುತ್ ಮೀಟರ್ ಗಳಿವೆ. ಅವರು ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ರೂ. 42,371 ಹಾಗೂ ಜೂನ್ ತಿಂಗಳಲ್ಲಿ ರೂ. 36,406 ವಿದ್ಯುತ್ ಬಿಲ್ ಬಂದಿದೆ. ಇದು ದಿ ಗ್ರೇಟ್ ಖಡಕ್ ಸಿಂಗಂ ಆಫೀಸರ್ ಮಾಡುವ ಕೆಲಸನಾ? ಯಾವ ಮಂತ್ರಿ ಮನೆಯಲ್ಲಿಯೂ ರೂ. 50 ಸಾವಿರದಷ್ಟು ವಿದ್ಯುತ್ ಬಿಲ್ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಭೂಮಾಫಿಯಾದಿಂದಾಗಿ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ಸಿಂಧೂರಿ ಆರೋಪಿಸಿದ್ದು, ನಿಮ್ಮ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸಿಎಂ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿ. ಈ ರೀತಿ ಪ್ರಚಾರಪ್ರಿಯೆ ಅವರನ್ನು ನಾನು ಎಲ್ಲಿಯೂ ಕಂಡಿಲ್ಲ. ಹೆಣ್ಣು ಮಕ್ಕಳಿಗೆ ತಾಯಿ ಹೃದಯ ಅಂತಾರೆ. ಆದರೆ, ಇವರಲ್ಲಿ ತಾಯಿ ಹೃದಯ ನೋಡಿಯೇ ಇಲ್ಲ. ಸಿಂಧೂರಿ ಲೋಪ ದೋಷಗಳ ಬಗ್ಗೆ ತನಿಖೆ ನಡೆಸಬೇಕು. ತನಿಖೆ ನಡೆಸದಿದ್ದರೆ, ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅದೇನೋ ಈಗ ಫಿಲಂ ತೆಗೆಯುತ್ತಾರಂತೆ. ಕರ್ನಾಟಕದ ಜನ ಸ್ವಾಭಿಮಾನಿಗಳು. ಪಿಕ್ಚರ್ ರಿಲೀಸ್ ಆಗಲಿ ನಾನು ನೋಡುತ್ತೇನೆ. ಬಡ ರೈತನ ಮಗ ಐಎಎಸ್ ಅಧಿಕಾರಿಯ ಬಗ್ಗೆ ಸಿಬಿಐ ಸಲ್ಲಿಸಿರುವ ರಿಪೋರ್ಟನ್ನು ನಾವು ತೆಗೆಯುತ್ತೇವೆ. ನಾವು ಬಡ ರೈತನ ಮಗ ಐಎಎಸ್ ಅಧಿಕಾರಿ ಜೀವನಗಾಥೆ ನಾವು ಚಿತ್ರ ರೂಪದಲ್ಲ ತೆಗೆಯುತ್ತೇವೆ ಎಂದು ಸಾ.ರಾ. ಗೋವಿಂದ್, ರೋಹಿಣಿ ಸಿಂಧೂರಿಗೆ ವಾರ್ನಿಂಗ್ ಮಾಡಿದ್ದಾರೆ.