ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ
ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಪೈಪೋಟಿ ನಡೆದಿದೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ಬಹಿರಂಗವಾಗಿಯೇ ತಮ್ಮ ನಾಯಕರ ಪರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರೆ, ಇನ್ನೂ ಕೆಲವರು ದಲಿತರು ಮುಖ್ಯಮಂತ್ರಿಯಾಗಲಿ, ಅದಕ್ಕೆ ಮಲ್ಲಿಕಾರ್ಜುನ ಖರ್ಗೆಯವರೇ ಸೂಕ್ತ ಎನ್ನುತ್ತಿದ್ದಾರೆ. ಈ ಇಬ್ಬರೂ ನಾಯಕರು ನಾವು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ ಎಂದು ಹೇಳಿದ್ದರೂ ಅವರ ಬೆಂಬಲಿಗರು ಮಾತ್ರ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುವುದನ್ನು ನಿಲ್ಲಿಸಿಲ್ಲ. ಹಲವು ಶಾಸಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಹಲವರು ಡಿಕೆಶಿ ಪರ ಮಾತನಾಡಿದ್ದಾರೆ. ಸ್ವತಃ ಡಿಕೆಶಿ, ಇದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಜತೆಗೆ, ಸಿದ್ದು ಆಂಡ್ ಟೀಂಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್ ಶಿಸ್ತುಸಮಿತಿಯ ಅಧ್ಯಕ್ಷ ರಹೆಮಾನ್ ಕಾನ್ ಅವರು, ನಾಯಕತ್ವದ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮುನ್ನೆಲೆಗೆ ಬಂದ ಉತ್ತರ ಕರ್ನಾಟಕದ ಹುಲಿ
ಇದೆಲ್ಲರದರ ಮಧ್ಯೆ ಈಗ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲರ ಹೆಸರೂ ಮುನ್ನೆಲೆಗೆ ಬಂದಿದೆ. ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲರೂ ಶಾಸಕರು ಹಾಗೂ ಸಚಿವರಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಅಂದು ಅವರು ಕಾಂಗ್ರೆಸ್‌ನ ಸಿಎಂ ರೇಸ್‌ನಲ್ಲಿದ್ದರು. ಆದರೆ, ಆಸೆ ಕೈಗೂಡಿರಲಿಲ್ಲ.
ಈ ಮೊದಲು ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಸಹಿತ ಹಲವು ಖಾತೆಗಳ ಸಚಿವರಾಗಿ ಅನುಭವ ಹೊಂದಿರುವ ಎಚ್.ಕೆ. ಪಾಟೀಲ ಹಿರಿಯರಾಗಿದ್ದು, ಪಕ್ಷದಲ್ಲೂ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಎಚ್.ಕೆ. ಪಾಟೀಲ್ ರನ್ನು ಸಿಎಂ ಮಾಡಬೇಕೆಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಒತ್ತಾಯ ಸಾಕಷ್ಟು ವೈರಲ್ ಆಗುತ್ತಿದೆ.
ಅಭಿಮಾನಿಗಳ ಅಭಿಮತವೇನು?
ರಾಜ್ಯದ ಸಂಭಾವಿತ ರಾಜಕಾರಣಿಗಳಲ್ಲಿ ಎಚ್.ಕೆ. ಪಾಟೀಲ್ ಕೂಡ ಒಬ್ಬರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಉತ್ತರ ಕರ್ನಾಟಕದ ಹುಲಿ ಎಂದೇ ಬಿಂಬಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
1985ರ ಚುನಾವಣೆ ಸಂದರ್ಭದಲ್ಲಿ ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲ್ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಭಾವೀ ಸಿಎಂ ಎಂದೇ ಬಿಂಬಿತವಾಗಿದ್ದರು. ಆದರೆ, ಅದೃಷ್ಟ ಒದಗಿ ಬರಲಿಲ್ಲ. 1989ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೆ.ಎಚ್. ಪಾಟೀಲರು ಸಚಿವ ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಸದ್ಯ ತಂದೆಯ ಬಯಕೆಯನ್ನು ಅವರ ಮಗ ಎಚ್.ಕೆ. ಪಾಟೀಲರು ಸಿಎಂ ಆಗಿ ಈಡೇರಿಸಬಲ್ಲರು ಎಂಬ ನಂಬಿಕೆ ರಾಜ್ಯದ ಜನತೆಗೆ ಇದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ಚರ್ಚೆಯಾಗುತ್ತಿದೆ.