ವಿಜಯಸಾಕ್ಷಿ ಸುದ್ದಿ, ಹಾವೇರಿ:
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಮನೆಯೊಂದರ ಮೇಲೆ ಬುಧವಾರ ರಾತ್ರಿ ಶೂಟೌಟ್ ಪ್ರಕರಣ ನಡೆದಿದೆ.
ಹುಲಗೂರು ಗ್ರಾಮದ ಆಜಾದ ಓಣಿಯ ಕೂಲಿ ಕಾರ್ಮಿಕ ಮಾಬುಸಾಬ್ ಹುಸೇನಸಾಬ್ ಗುಡಗೇರಿ ಎಂಬುವರು ಪುತ್ರಿಯನ್ನು ಗುರಿಯಾಗಿಸಿಕೊಂಡು ಇಬ್ಬರು ಆಗುಂತಕರು ಈ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಉಳಿದ ಮನೆ ಮಂದಿಯೆಲ್ಲಾ ಮಲಗಿದ್ದರಿಂದ ದೊಡ್ಡ ದುರಂತ ತಪ್ಪಿದೆ.
ಗುಂಡು ಹಾರಿಸಿದ ರಭಸಕ್ಕೆ ಕಿಟಕಿಯಲ್ಲಿದ್ದ ತಗಡಿನ ಮುಖಾಂತರ ಒಳಗಡೆ ಹೊಕ್ಕಿದ್ದು, ಹಾಲ್ ನಲ್ಲಿ 6 ರಂಧ್ರಗಳು ಬಿದ್ದಿವೆ. ಗುಂಡು ಹಾರಿಸಿದ ವೇಳೆಯಲ್ಲಿ ಕರೆಂಟು ಇಲ್ಲದಿರುವುದರಿಂದ ಗುಂಡು ಯಾರಿಗೂ ತಾಗಿಲ್ಲ.
ಸುದ್ದಿ ತಿಳಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಭಯ ಪಡದಂತೆ ಆತ್ಮಸ್ಥೈರ್ಯ ತುಂಬಿದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರಿಗೆ ಒತ್ತಾಯಿಸಿದರು.
ಇತ್ತೀಚಿಗೆಷ್ಟೇ ಪಟ್ಟಣದ ಸಿನೀಮಾ ಟಾಕೀಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ ಬಂಧಿಸಿದ ಬೆನ್ನಲ್ಲೆ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.