- ಚರ್ಚೆಗೆ ಗ್ರಾಸವಾದ ಸ್ಥಳೀಯ ಶಾಸಕರ ಗೈರು
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಸಿಎಂ ಬಿಎಸ್ ವೈ ಬೆಳಗಾವಿಗೆ ಆಗಮಿಸಿದರೂ ಜಾರಕಿಹೊಳಿ ಬ್ರದರ್ಸ್ ಸುಳಿವೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಾಸಕ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲೇ ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ ಜನತೆ ತೊಂದರೆಗೆ ಸಿಲುಕಿದ್ದಾರೆ.
ಸ್ವತಃ ಸಿಎಂ ಪರಿಶೀಲನೆಗೆ ಬಂದರೂ ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಗೈರು ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಿಎಂ ಬಿಎಸ್ ವೈ ಅವರಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ ಬ್ರದರ್ಸ್ ನಡೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರ ರಚನೆ ಆದಾಗಿನಿಂದಲೂ ರಮೇಶ ಜಾರಕಿಹೊಳಿ ಸಿಎಂ ಜೊತೆಗೆ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಕೊಟ್ಟ ಮಾತಿನಂತೆ ಡಿಸಿಎಂ ಮಾಡದಿರುವುದು, ತಮ್ಮ ಖಾತೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪ ರಮೇಶ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಒಂದು ಹಂತದಲ್ಲಿ ಬಿಎಸ್ ವೈ ಕೆಳಗಿಳಿಸಲು ಜಾರಕಿಹೊಳಿ ಬ್ರದರ್ಸ್ ಬಂಡಾಯ ಶಾಸಕರ ಒಗ್ಗೂಡಿಸುವ ಕಾರ್ಯವನ್ನೂ ಆರಂಭಿಸಿದ್ದರು.
ಈ ಹಂತದಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ಸೀಡಿ ಬಾಂಬ್ ಸಿಡಿದು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದರ ಹಿಂದೆ ಡಿಕೆಶಿ ಜೊತೆಗೆ ವಿಜಯೇಂದ್ರ ಕೈವಾಡವೂ ಇರಬಹುದು ಎಂಬ ಗುಮಾನಿ ಜಾರಕಿಹೊಳಿ ಬ್ರದರ್ಸ್ ಮನದಲ್ಲಿ ಬೇರೂರಿದೆ.
ಮತ್ತೊಂದೆಡೆ ಆದಷ್ಟು ಬೇಗ ಸೀಡಿ ಕೇಸ್ ವಿಚಾರಣೆ ಮುಕ್ತಾಯಗೊಳಿಸಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ರಮೇಶ ಜಾರಕಿಹೊಳಿ ದುಂಬಾಲು ಬಿದ್ದಿದ್ದರು. ಆದರೆ, ಈ ಕೋರಿಕೆಗೆ ಸಿಎಂ ಸೊಪ್ಪು ಹಾಕಿರಲಿಲ್ಲ. ಸಚಿವ ಸ್ಥಾನ ಕಳೆದುಕೊಂಡು ಕುದಿಯುತ್ತಿರುವ ರಮೇಶ ಜಾರಕಿಹೊಳಿ, ಸೀಡಿ ಕೇಸ್ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಖುದ್ದು ಹೋಗಿದ್ದಾರೆ. ಇದೇ ಅಸಮಾನದಿಂದಲೇ ಇಂದಿನ ಸಿಎಂ ಪ್ರವಾಹ ಪರಿಶೀಲನೆಗೆ ಗೈರಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ.