ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆ ಈ ಬಾರಿ ಕೇವಲ ಸಿನಿಮಾಗಳ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಉತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್, ಚಲನಚಿತ್ರೋತ್ಸವದ ಮೂಲ ಆಶಯ, ಮಾನವೀಯತೆಯ ಪ್ರಶ್ನೆ ಮತ್ತು ರಾಜಕೀಯ ಹಸ್ತಕ್ಷೇಪದ ವಿರುದ್ಧ ಗಂಭೀರ ಧ್ವನಿಯಲ್ಲಿ ಮಾತನಾಡಿದರು.
‘16 ವರ್ಷಗಳ ಹಿಂದೆ ನಾನು ಈ ಉತ್ಸವವನ್ನು ಉದ್ಘಾಟಿಸಿದ್ದೆ. ಆಗ ಇದು ಸಂಸ್ಕೃತಿಗಳ ಸಂಗಮವಾಗಬೇಕು ಎಂಬ ಕನಸಿನಿಂದ ಹುಟ್ಟಿದ ಪ್ರಯತ್ನವಾಗಿತ್ತು. ಇಂದು ಅದೇ ವೇದಿಕೆಯಲ್ಲಿ ನಾನು ನಟನಾಗಿ ಮಾತ್ರವಲ್ಲ, ನಿರ್ಮಾಪಕ, ವಿತರಕ ಮತ್ತು ರಾಯಭಾರಿಯಾಗಿ ನಿಂತಿದ್ದೇನೆ’ ಎಂದು ಅವರು ಹೇಳಿದರು.
ಅಂತರಿಕ್ಷದಿಂದ ಭೂಮಿಯನ್ನು ಕಂಡ ಅನುಭವದ ಬಗ್ಗೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ನೀಡಿದ ಉತ್ತರವನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ‘ಈ ಭೂಮಿ ಮನುಷ್ಯರಿಗಿಂತ ಪ್ರಾಣಿಗಳದ್ದು ಹೆಚ್ಚು. ಆದರೂ ನಾವು ಜಗಳ, ಯುದ್ಧಗಳಲ್ಲಿ ತೊಡಗಿದ್ದೇವೆ’ ಎಂಬ ಮಾತುಗಳು ತಮ್ಮನ್ನು ತಟ್ಟಿದವು ಎಂದು ಹೇಳಿದರು.
ಅಂತರಾಷ್ಟ್ರೀಯ ಚಿತ್ರೋತ್ಸವಗಳು ಗಡಿಗಳನ್ನು ಮೀರಿ ಮಾನವೀಯತೆಯನ್ನು ಬೆಳೆಸಬೇಕಾದ ವೇದಿಕೆಗಳಾಗಬೇಕು. ಆದರೆ ಇತ್ತೀಚೆಗೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಮಾಡಿರುವುದು ದುಃಖಕರ ಸಂಗತಿ ಎಂದು ಅವರು ಕಟುವಾಗಿ ಟೀಕಿಸಿದರು. ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಕೇವಲ ಕಲೆಯ ಮೇಲೆ ಮಾತ್ರವಲ್ಲ, ಮಾನವೀಯತೆಯ ಮೇಲೆಯೂ ಹಸ್ತಕ್ಷೇಪವಾಗಿದೆ ಎಂದು ಹೇಳಿದರು.
‘ನಮ್ಮ ಕಥೆಗಳು ಜಗತ್ತಿನ ವೇದಿಕೆಗೆ ಹೋದಾಗ ನಾವು ಹೆಮ್ಮೆಪಡುತ್ತೇವೆ. ಆದರೆ ಜಗತ್ತಿನ ನೋವಿನ ಕಥೆಗಳು ನಮ್ಮ ನೆಲಕ್ಕೆ ಬರಬಾರದು ಎನ್ನುವುದು ಯಾವ ತರ್ಕ?’ ಎಂದು ಪ್ರಶ್ನಿಸಿದ ಅವರು, ಕೇರಳ ಸರ್ಕಾರ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡಿರುವುದನ್ನು ಉದಾಹರಿಸಿದರು.
‘ನಮ್ಮ ಕಣ್ಣೀರಿನ ಪರಿಚಯ ನಮ್ಮ ನೋವಿಗೆ ಮಾತ್ರ ಸೀಮಿತವಾಗಿರಬಾರದು. ಇತರರ ನೋವಿಗೂ ನಾವು ಅಳಬೇಕು. ಇಲ್ಲದಿದ್ದರೆ ನಾವು ಮನುಷ್ಯರಾಗಿರೋದಕ್ಕೆ ಅರ್ಥವಿಲ್ಲ’ ಎಂದು ಹೇಳಿದ ಪ್ರಕಾಶ್ ರಾಜ್, ಪ್ಯಾಲೆಸ್ತೀನ್ ಸಿನಿಮಾಗಳಿಗೆ ಅವಕಾಶ ನಿರಾಕರಿಸಿದರೆ, ವೇದಿಕೆಯಲ್ಲೇ ಪದ್ಯ ಓದುತ್ತೇನೆ ಎಂದು ತಮ್ಮ ಪ್ರತಿರೋಧವನ್ನು ಘೋಷಿಸಿದರು.



