ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೇಂದ್ರ ಬಿಜೆಪಿ ಸರಕಾರ ಜನರ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಇದು ಇಂದಿರಾ ಗಾಂಧಿಗಿಂತಲೂ ಕೆಟ್ಟ ತುರ್ತು ಪರಿಸ್ಥಿತಿ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಧಾನ ಕಾಯದರ್ಶಿ ಮಂಜುನಾಥ ಜಿ. ಗೊಂಡಬಾಳ ಕೇಂದ್ರದ ನೂತನ ನೀತಿಯನ್ನು ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಂದಿನ ಪರಿಸ್ಥಿತಿಯಲ್ಲಿ ದೇಶ ಕೈ ಮೀರಿದ ಕಾರಣಕ್ಕೆ ಕೆಲವು ತಿಂಗಳು ತುರ್ತು ಪರಿಸ್ಥಿತಿ ಹೇರಿ ಯಾರೂ ಏನೂ ಮಾತಾಡಬಾರದು ಎಂದಿದ್ದರು.
ಅದನ್ನು ಜನ ತಿರಸ್ಕರಿಸಿ ಅವರನ್ನು ಸೋಲಿಸಿದರು. ಹಾಗೂ ಮುಂದೆ ಬೇರೊಂದು ಪಕ್ಷ ಉದಯಿಸಿ ಬೆಳೆದು ಇಂದು ಅಧಿಕಾರಕ್ಕೆ ಬಂದು ಯಾವುದನ್ನು ವಿರೋಧಿಸಿ ಅಧಿಕಾರ ಹಿಡಿದರೋ ಅದನ್ನೇ ಜೀವನಪರ್ಯಂತ ತರಲು ಹೊರಟಿದೆ ಎಂದು ಅವರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಅಂದರೆ ನೂತನ ಮಾಹಿತಿ ತಂತ್ರಜ್ಞಾನ ತಿದ್ದುಪಡಿ 2021 ರಲ್ಲಿ ಸಾಮಾಜಿಕ ಜಾಲತಾಣ ನಿಯಂತ್ರಣ ಹಾಗೂ ಮಾಧ್ಯಮ ನಿಯಂತ್ರಿಸುವ ದೂರದೃಷ್ಟಿಯಿಂದ ಸರಕಾರ ತನಗೆ ಅನುಕೂಲವಾಗುವಂತಹ ಬದಲಾವಣೆ ಮಾಡಿಕೊಂಡಿದೆ.
ಒಬ್ಬ ವ್ಯಂಗ್ಯಚಿತ್ರಕಾರನೂ ಸಹ ಮಾತಾಡಬಾರದು. ಕೇಂದ್ರದ ವಿರುದ್ಧ ಯಾರೂ ಮಾತಾಡಬಾರದು. ಮುಂಬರುವ ದಿನಗಳಲ್ಲಿ ಬೇಸತ್ತ ಜನರಿಂದ ಕೇಂದ್ರದ ವಿರುದ್ಧ ಬರಬಹುದಾದ ಜನಾಕ್ರಮಣದ ನಿಯಂತ್ರಣ ಕೆಲಸಕ್ಕೆ ಅದು ಮುಂದಾಗಿದ್ದು, ಅದರ ಮುಂದುವರೆದ ಭಾಗವಾಗಿ ಸಿನೆಮಾ ಮಾಧ್ಯಮ ಮೂಲಕವೂ ಬಿಜೆಪಿ ಮತ್ತು ಅದರ ನಾಯಕರ ಮೇಲೆ ಯಾವುದೇ ಆರೋಪ ಮಾಡಬಾರದು. ಅವರ ವಿರುದ್ಧ ಚಿತ್ರ ನಿರ್ಮಾಣವಾಗದಿರಲಿ ಎಂಬ ಉದ್ದೆಶದಿಂದ ಸಿನೆಮಾಟೋಗ್ರಾಫ್ ಆಕ್ಟ್ 1952ಗೆ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಫಿಲ್ಮ್ ಸರ್ಟಿಫಿಕೇಟ್ ಆಫ್ ಅಪಾಲೇಟ್ ಟ್ರಿಬ್ಯೂನಲ್ ಅಂದರೆ ತ್ರಿಸದಸ್ಯ ಮೇಲ್ಮನವಿ ನ್ಯಾಯಪೀಠವನ್ನು ರದ್ದುಗೊಳಿಸಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ವಿರುದ್ಧ ಮೇಲ್ಮನವಿ ಹೋಗದಂತೆ ಮಾಡಿ ಬೆನ್ನಿಗೆ ಬರೆ ಎಳೆದಿದೆ. ಈಗ ಕಾಯ್ದೆಗೆ ತಿದ್ದುಪಡಿ ತಂದು ಕುಂಡಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ನೂತನ ತಿದ್ದುಪಡಿಯಲ್ಲಿ ಇರುವ ಮೂರು ಅಂಶಗಳು ಸಿನೆಮಾ ಕ್ಷೇತ್ರವನ್ನು ಸರ್ವನಾಶ ಮಾಡುವ ಜೊತೆಗೆ ಕೇಂದ್ರದ ಸಂಪೂರ್ಣ ಸಿನೆಮಾ ಸ್ವಾಯತ್ತತೆ ಹೊಂದಲಿದೆ, ಅದು ಒಂದು ರೀತಿ ಸಿನಿಮಾದವರು ತಮ್ಮ ಚಿತ್ರ ಪ್ರದರ್ಶನ ಕಾಣಬೇಕು. ಸರಕಾರದ ಸಹಾಯ ಬೇಕು ಅಂದರೆ ಈಗ ರಾಜಕಾರಣಿಗಳ ರೀತಿ ವಿರೋಧ ಪಕ್ಷವನ್ನು ಬಿಟ್ಟು ಬಿಜೆಪಿ ಪಡಸಾಲೆ ಸೇರಿಕೊಂಡು ಅವರ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ಸ್ಪಷ್ಟ ಉದ್ದೇಶವಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಎಲ್ಲಾ ಬಹುತೇಕ ಕಾನೂನುಗಳ ಹಿಂದೆ ದಕ್ಷಿಣ ಭಾರತ, ಹಿಂದಿಯೇತರ ಜನರ ನಿಯಂತ್ರಣದ ಹುನ್ನಾರವಿದೆ, ನಮ್ಮನ್ನು ನೋಡಿದರೆ ಅವರ ಮೈ ಕುದಿಯುತ್ತದೆ. ಅದಕ್ಕಾಗಿ ಅವರು ದೇಶ ರಕ್ಷಿಸಿ, ದೇಶ ವಾಸಿಗಳನ್ನು ಉಳಿಸುವ ಬದಲಿಗೆ ಸುಳ್ಳು ದೇಶ ರಕ್ಷಕರೆಂಬ ಭ್ರಮೆ ಹುಟ್ಟಿಸಿದ್ದಾರೆ. ಮುಂದೆ ಜನರು ಮಾತನಾಡದಂತೆ ಫ್ಯಾಸಿಸ್ಟ್ ಆಡಳಿತ ತರುವ ಯೋಜಿತ ಧೀರ್ಘ ಪ್ರಯಾಣ ಆರಂಭಿಸಿದ್ದಾರೆ. ಮೊದಲು ಒಂದೊಂದೆ ಟೊಂಗೆ ಮುರಿದು ಗುಂಡಾರ ಮಾಡುತ್ತಿದ್ದಾರೆ ಎಂದು ಗೊಂಡಬಾಳ ಗುಡುಗಿದ್ದಾರೆ.
ಸಿನಿಮಾ ಸೆನ್ಸಾರ್ ಆದ ಮೇಲೂ ಆಕ್ಷೇಪಣೆ ಇದ್ದಲ್ಲಿ ಚಿತ್ರ ಪ್ರದರ್ಶನ ರದ್ದುಗೊಳಿಸುವ ತೀರ್ಮಾನ ಬಾಲಿಶವಾದದ್ದು, ಕೋಟಿ ಕೋಟಿ ಹಣ ಹಾಕಿ ಬೀದಿಗೆ ಬರುವಂತಾದರೆ ಹೆಂಗೆ ಎಂದು ಕಲಾವಿದರು, ನಿರ್ಮಾಪಕರು ಬಿಜೆಪಿ ಸೇರಬೇಕು, ಅದರ ರಕ್ಷಣೆ ಪಡೆದು ಬದುಕಬೇಕು ಎಂದು ನಿರ್ಧರಿಸಿದೆ. ದಕ್ಷಿಣ ಭಾರತದ ಸಿನೆಮಾ ಮಂದಿ ರಾಜಕಾರಣದಲ್ಲಿ ಉತ್ತಮ ಹಿಡಿತ ಹೊಂದಿದ್ದು ಅದನ್ನು ತಪ್ಪಿಸಲು ಈ ಹೊಸ ಯೋಜನೆ ಎಂಬುದು ಸ್ಪಷ್ಟವಾಗಿದ್ದು, ಇದರ ವಿರುದ್ಧ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರು ಹೋರಾಟ ರೂಪಿಸುತ್ತಾರೆ, ಇದನ್ನು ರಾಜ್ಯದ ಮೂಲೆ ಮೂಲೆಗೆ ಶುರು ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
Trending Now



