ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಅವರು ಗುರುವಾರ ತಮ್ಮ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಸಾಮಾಜಿಕ ಕಳಕಳಿಯುಳ್ಳ ಸಂದೇಶ ಇದೀಗ ವೈರಲ್ ಆಗಿದೆ. ಅನೇಕರು ಅದನ್ನು ತಮ್ಮ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿಕೊಂಡು, ಉಪಯುಕ್ತ ಮಾಹಿತಿಯನ್ನು ಸ್ನೇಹಿತರಿಗೆ ಶೇರ್ ಮಾಡುತ್ತಿದ್ದಾರೆ.
ಏನಿದೆ ಸ್ಟೇಟಸ್‌ನಲ್ಲಿ?
ಗೆಳೆಯರೆ, ಎಲ್ಲರಿಗೂ ನನ್ನ ನಮಸ್ಕಾರ, ನಾವೆಲ್ಲರೂ ತುಂಬಾ ಸಂದಿಗ್ಧವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಮುಂಬರುವ ದಿನಗಳಲ್ಲಿಯೂ ತುಂಬ ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ಬರುತ್ತದೆ. ನಿನ್ನೆವರೆಗೆ ನಮ್ಮ ಜೊತೆಗೆ ಇದ್ದಂತಹ ಗೆಳೆಯರು ಒಬ್ಬೊಬ್ಬರಾಗಿ ನಮ್ಮಿಂದ ದೂರವಾಗುತ್ತಿದ್ದಾರೆ. ನೀವೆಲ್ಲರೂ ನಿಮ್ಮ ಕುಟುಂಬಕ್ಕೆ, ಸಮಾಜಕ್ಕೆ ಅಮೂಲ್ಯವಾದ ವ್ಯಕ್ತಿಗಳು, ನಿಮ್ಮ ಮೇಲೆ ನಿಮ್ಮ ಕುಟುಂಬವೇ ಸಂಪೂರ್ಣ ಅವಲಂಬಿತವಾಗಿರುತ್ತದೆ. ಕೊರೊನಾ ಎಂಬ ಮಹಾಮಾರಿಯ ವಿಧಿಯ ಆಟಕ್ಕೆ ನಾವೆಲ್ಲರೂ ಬಲಿಪಶುಗಳಾಗುತ್ತಿದ್ದೇವೆ. ನಾವು ಇದ್ದಷ್ಟು ದಿನ ಎಲ್ಲರ ಜತೆಯೂ ಸ್ನೇಹ, ಸಹಕಾರದಿಂದ, ಪ್ರೀತಿ-ವಾತ್ಸಲ್ಯದಿಂದ ಇರೋಣ. ಈ ಮಹಾಮಾರಿಯು ನಮಗೆ ತುಂಬಾ ಒಳ್ಳೆಯ ಪಾಠವನ್ನು ಕಲಿಸಿದೆ, ಇದರ ಜೊತೆ ಆಟ ಆಡುವುದು ಬೇಡ. ಕಡ್ಡಾಯವಾಗಿ ಈ ಸಾಮಾಜಿಕ ಕಳಕಳಿಯ ನಿಯಮಗಳನ್ನು ಪಾಲಿಸೋಣ, ಇಡೀ ಮಾನವ ಕುಲಕ್ಕೆ ಮುಳುವಾಗಿರುವ ಕೊರೊನಾ ಮಹಾಮಾರಿಯನ್ನು ನಮ್ಮ ಗ್ರಾಮದಿಂದ, ರಾಜ್ಯದಿಂದ, ದೇಶದಿಂದ ಈ ಪ್ರಪಂಚದಿಂದಲೇ ಕಿತ್ತು ಹಾಕುವಂತಹ ಪ್ರಯತ್ನ ನಮ್ಮ ನಿಮ್ಮೆಲ್ಲರದಾಗಿರಲಿ, ಆರೋಗ್ಯವೇ ಭಾಗ್ಯ- ಇಂತಿ ನಿಮ್ಮವ,
ವಿಕಾಸ ಲಮಾಣಿ, ಸಿಪಿಐ ಶಿರಹಟ್ಟಿ.