ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕೊರೊನಾ ಹಾವಳಿಯಿಂದಾಗಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮುಹೂರ್ತ ಕೂಡಿ ಬರುತ್ತಿಲ್ಲ. ಸದ್ಯ ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯನ್ನು ಎರಡೂವರೆ ಗಂಟೆ ಬದಲಾಗಿ ಕೇವಲ 20 ನಿಮಿಷಕ್ಕೆ ನಿಗದಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಕೇವಲ 30 ನಿಮಿಷಗಳ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಜೂ. 1ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಪರೀಕ್ಷೆಯ ದಿನಾಂಕ ಹಾಗೂ ಸಮಯ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
ಪಿಯುಸಿ ವಿದ್ಯಾರ್ಥಿಗಳು ಈ ಹಿಂದೆ ಎರಡೂವರೆ ಗಂಟೆಗಳ ಕಾಲ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷಾ ಅವಧಿಯನ್ನು 30 ನಿಮಿಷಕ್ಕೆ ಇಳಿಸಲು ಮುಂದಾಗಿದ್ದು, ಎಲ್ಲವೂ ವಸ್ತುನಿಷ್ಠ (ಬಹುಆಯ್ಕೆ) ಪ್ರಶ್ನೆಗಳಿರಲಿವೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಪರೀಕ್ಷೆಯ ಕುರಿತು ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿತ್ತು. ಬಹುತೇಕ ರಾಜ್ಯಗಳು ಸಿಬಿಎಸ್ಇ್ 12ನೇ ತರಗತಿ ಪರೀಕ್ಷೆ ನಡೆಸುವ ಸಲಹೆ ನೀಡಿದ್ದವು.
ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮಾತ್ರ ಪರೀಕ್ಷೆ ಇಲ್ಲದೇ ಮಕ್ಕಳನ್ನು ಪಾಸ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಟ್ಟಿದ್ದವು. ಆದರೆ, 32 ರಾಜ್ಯಗಳ ಪೈಕಿ 29 ರಾಜ್ಯಗಳು ಕಡಿಮೆ ಅವಧಿಯ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದವು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಾಜಸ್ಥಾನ, ತ್ರಿಪುರ ಮತ್ತು ತೆಲಂಗಾಣ ಮಾತ್ರ ಮೊದಲಿನ ಪದ್ಧತಿಯಂತೆ ಪರೀಕ್ಷೆ ನಡೆಸಲು ಸಲಹೆ ನೀಡಿದ್ದವು.