ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಸಿ.ಟಿ.ರವಿ, ಈಶ್ವರಪ್ಪ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ, ಬಾಯಿಗೆ ಬಂದಂತೆ ಹೇಳಿಕೆ ನೀಡಿ ಚಿಕ್ಕವರಾಗುತ್ತಿದ್ದಾರೆ. ಆ ಪಕ್ಷದ ವರಿಷ್ಠರು ಅವರಿಗೆ ಬುದ್ದಿ ಹೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅಥಣಿಯಲ್ಲಿ ರವಿವಾರ ಮಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹುಕ್ಕಾ ಬಾರ್ , ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ನಮ್ಮದು ಶಿಸ್ತಿನ, ಸಂಸ್ಕೃತಿಯ ಪಕ್ಷ ಎಂದು ಹೇಳುವ ಬಿಜೆಪಿಯವದು ಇದೇ ಸಂಸ್ಕೃತಿನಾ ಎಂದು ಪ್ರಶ್ನಿಸಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರೀತಿ ವಿಶ್ವಾಸ ಸಿಕ್ಕಿರಲಿಲ್ಲ, ಸಂಘ ಪರವಾರ ಮತ್ತು ಬಿಜೆಪಿ ಹೈಕಮಾಂಡ್‌ನಿಂದ ನನಗೆ ಹೆಚ್ಚಿನ ಪ್ರೀತಿ ಸಿಕ್ಕಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಸತೀಶ ಜಾರಕಿಹೊಳಿ, ಎಷ್ಟು ಲವ್ ಆಗಿದೆ ಎಂದು ಅವರನ್ನೇ ಕೇಳಿ, ಎಷ್ಟು ಅಪ್ಪಿಕೊಂಡಿದ್ದಾರೆ, ಎಷ್ಟು ಪ್ರೀತಿ ವಿಶ್ವಾಸ ಸಿಕ್ಕಿದೆ. ಅದಕ್ಕಾಗಿಯೆ ಗೋಕಾಕನಿಂದ ಬೆಂಗಳೂರಿಗೆ ಬೆಂಗಳೂರಿನಿಂದ ದೆಹಲಿಗೆ ಅಲೆದಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ. ಇಂತಹ ಆರೋಪ ಹೊತ್ತವರು ಸಾಕಷ್ಟು ಜನ ಬಿಜೆಪಿಯಲ್ಲಿದ್ದಾರೆ ಎಂದರು.
ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ರಾಜು ಕಾಗೆ, ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗಜಾನನ ಮಂಗಸೂಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.