ಬಿಎಸ್ಕೆ
ವಿಜಯಸಾಕ್ಷಿ ವಿಶೇಷ ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಈಗ ಅಶ್ವತ್ಥಾಮನಾಗಿ ತೆರೆ ಮೇಲೆ ಬರಲಿದ್ದಾರೆ.
ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳ ಟ್ರೆಂಡ್ ಹೆಚ್ಚುತ್ತಿದೆ. ಬಿಗ್ ಬಜೆಟ್ ಹೊಂದಿರುವ ಇಂಥ ಸಿನಿಮಾಗಳು ಗೆದ್ದದ್ದೇ ಹೆಚ್ಚು. ಬಹಳ ವರ್ಷಗಳ ನಂತರ ಡಾ.ಶಿವಣ್ಣ ಈಗ ಪೌರಾಣಿಕ ಕತೆಯ ಸಿನಿಮಾದಲ್ಲಿ ನಟಿಸಲು ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ.
ಶಿವ ಮೆಚ್ಚಿದ ಕಣ್ಣಪ್ಪ, ಗಂಡುಗಲಿ ಕುಮಾರರಾಮ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಐತಿಹಾಸಿಕ, ಪೌರಾಣಿಕ ಕಥಾಹಂದರದಲ್ಲಿ ಪ್ರವೇಶಿಸಿರುವ ಅನುಭವದ ಆ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.
ಫ್ಯಾಂಟಸಿ ಕಥೆಯಾಧಾರಿತ ಮಿ.ಪುಟ್ಸಾಮಿ ಸಿನಿಮಾ ಸಹ ಶಿವಣ್ಣನಿಗೆ ಒಳ್ಳೇ ಹೆಸರು ತಂದುಕೊಟ್ಟಿತ್ತು. ಈಗ ಮತ್ತೇ ಪುರಾಣ ಹಿನ್ನೆಲೆಯ ಸಿನಿಮಾದಲ್ಲಿ ಶಿವಣ್ಣ ನಟಿಸಲು ಒಪ್ಪಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ.
ಚಿತ್ರಕ್ಕೆ ಅಶ್ವತ್ಥಾಮ ಹೆಸರನ್ನು ಫೈನಲ್ ಮಾಡಲಾಗಿದೆ. ರಾಜ್ಯೋತ್ಸವದ ದಿನ ಚಿತ್ರದ ಮೊದಲ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಕ್ರವ್ಯೂಹದಲ್ಲಿ ಸಿಲುಕಿರುವ ಅಭಿಮನ್ಯುವಿನಂತೆ ಮದ್ಯದಲ್ಲಿರುವ ಶಿವಣ್ಣನ ಸುತ್ತ ಧನಸು, ಬಂದೂಕು, ಪಿಸ್ತೂಲು, ಮಚ್ಚು, ಕುಡಗೋಲು.. ವಿವಿಧ ಆಯುಧಗಳು ಸುತ್ತುವರಿದಿವೆ. ಈ ಪೋಸ್ಟರ್ ನೋಡಿದರೆ ಇದು ಪೌರಣಿಕ ಕಥೆಯೋ, ಕ್ರೈಂ ಬೇಸ್ಡ್ ಸ್ಟೋರಿಯೊ? ಎಂಬ ಪ್ರಶ್ನೆಗಳು ಸುಳಿದಾಡುತ್ತವೆ. ಯಾಕೆಂದರೆ ಅಶ್ವತ್ಥಾಮನನ್ನು ನಿರ್ದೇಶಿಸುತ್ತಿರೋದು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್. ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರ ನಿರ್ಮಾಣಕ್ಕೆ ಒಲವು ತೋರಿದ್ದಾರೆ.
ಇದು ಮಹಾಭಾರತದ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮನ ಕಥೆಯೋ? ಅಥವಾ ಈಗಿನ ವ್ಯವಸ್ಥೆಯ ಅಶ್ವತ್ಥಾಮನ ಸ್ಥಿತಿಯ ಕಾಲ್ಪನಿಕ ಕತೆಯೊ? ಎಂಬುದನ್ನು ಅರಿಯಲು ಇನ್ನು ಕೆಲ ತಿಂಗಳು ಕಾಯಲೇಬೇಕು.
ಸೆಂಚುರಿ ಸ್ಟಾರ್ ಶಿವಣ್ಣ ಈಗ ಅಶ್ವತ್ಥಾಮ!
Advertisement