ವಿಜಯಸಾಕ್ಷಿ ಸುದ್ದಿ, ಗದಗ
ದೊಡ್ಡ ದೊಡ್ಡ ಕುಳಗಳಿಂದ ಕೋಟ್ಯಾಂತರ ರೂಪಾಯಿಗಳ ವಂಚನೆ ಆರೋಪ ಹೊತ್ತಿದ್ದ ಫೈನಾನ್ಸ್ ಮಾಲೀಕ ಇಲ್ಲಿನ ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ರಾಘವೇಂದ್ರ ಶಿಂಧೆಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ ವಿಜಯ ಶಿಂಧೆ ಗದಗ-ಬೆಟಗೇರಿ ಅವಳಿನಗರದ ಶ್ರೀಮಂತ ಜನರಿಗೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಿದ್ದ.
ನಗರದ ಸ್ಟೇಷನ್ ರಸ್ತೆಯ ನಗರಸಭೆ ಎದುರು ಕಛೇರಿ ತೆರದು ಫೈನಾನ್ಸ್ ದಂಧೆ ನಡೆಸುತ್ತಿದ್ದ ಆರೋಪಿ ವಿಜಯ ಶಿಂಧೆ ಅವಳಿ ನಗರದ ದೋ ನಂಬರ್ ದಂಧೆಕೋರರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಬಡ್ಡಿಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಕಳೆದ ಎರಡು ವರ್ಷಗಳ ಹಿಂದೆ `ಲಾಸ್ ಆಗೀನಿ’ ಎಂಬ ಫೋಸ್ ಕೊಟ್ಟ ಭೂಪ ವಿಜಯ ಶಿಂಧೆ ದುಡ್ಡು ಹಾಕಿದವರಿಗೆ ಉಂಡೆನಾಮ ಹಾಕಿದ.
ಇದನ್ನು ಕೇಳಿದ ನಂಬರ್ ಟೂ ಬ್ಯುಸಿನೆಸ್ ಮಾಡುವವರೆಲ್ಲಾ ಅದುರಿಹೋದರು. ಹಾಕಿದ ದುಡ್ಡಿಗೆ ಯಾವುದೇ ಪುರಾವೆ ಇಲ್ಲ. ದೊಡ್ಡ ಮೊತ್ತದ ಬಡ್ಡಿ ಬರುವ ದುರಾಸೆಯಿಂದ ಲಕ್ಷ-ಲಕ್ಷ ಹಣ ಕೊಟ್ಟವರು ಹಾಸಿಗೆ ಹಿಡಿದರು!
ಇಷ್ಟೆಲ್ಲಾ ಆದರೂ ಲಾಸ್ ಆದ ಬಗ್ಗೆ ಫೋಸ್ ಕೊಟ್ಟಿದ್ದ ವಿಜಯ ಶಿಂಧೆಯ ಬಗ್ಗೆ ಯಾರೂ ದೂರು ಕೊಡಲು ಮುಂದಾಗಲಿಲ್ಲ. ಆದರೂ ಒಬ್ಬರು ಧೈರ್ಯ ಮಾಡಿ ಆತನ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು.
2020ರ ಅಕ್ಟೋಬರ್ ನಿಂದ 2022ರ ಏಪ್ರಿಲ್ 23 ರವರೆಗೆ ಈ ವಂಚನೆ ನಡೆದಿದೆ
2020ರ ಅಕ್ಟೋಬರ್ 1ರಂದು ಹತ್ತು ಲಕ್ಷ ರೂಪಾಯಿ ಹಾಗೂ 407.07 ಗ್ರಾಂ. ಬಂಗಾರದ ಆಭರಣಗಳನ್ನು ನೀವು ಕೇಳಿದಾಗ ಯಾವುದೇ ತಕರಾರು ಇಲ್ಲದೇ ವಾಪಾಸು ಕೊಡ್ತೀನಿ ಅಂತ ಹೇಳಿ ಇದುವರೆಗೂ ಕೊಡದೇ ವಿಜಯ ಶಿಂಧೆ ಮೋಸ ಮಾಡಿದ್ದಾರೆ ಎಂದು ಕಳಸಾಪೂರ ರಸ್ತೆಯ ಸಂತೋಷ ಪ್ರಭಾಕರ್ ಮುತಗಾರ ಎಂಬುವವರು ಸೈಬರ್ ಠಾಣೆಗೆ ಕಳೆದ ತಿಂಗಳು ಅಂದರೆ, ಜೂನ್ 03ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ದೀರ್ಘ ಕಾಲ ತನಿಖೆ ನಡೆಸಿ ಸೋಮವಾರ ಬಂಧಿಸಿ ಕಂಬಿಯ ಹಿಂದೆ ನೂಕಿದ್ದಾರೆ. ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವಿಜಯ ಶಿಂಧೆ ಬಂಧಿಸಿದ ಪೊಲೀಸರ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲದೆ ಹಣ ಹೂಡಿಕೆ ಮಾಡಿದ ಬಗ್ಗೆ ಯಾರಾದರೂ ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಸೈಬರ್ ಠಾಣೆಗೆ ಮಾಹಿತಿ ನೀಡಲು ಎಸ್ಪಿ ಶಿವಪ್ರಕಾಶ್ ದೇವರಾಜು ಕೋರಿದ್ದಾರೆ.
ತನಿಖೆಯ ಕುರಿತು ಅಪಸ್ವರ
ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಆರೋಪಿ ವಿಜಯ ಶಿಂಧೆಯ ಬಂಧನದ ಬಗ್ಗೆ ಹಣ ಕಳೆದುಕೊಂಡವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಕಾಟಾಚಾರಕ್ಕೆ ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ವಿಷಯವೇನೇ ಇದ್ದರೂ ಕಳೆದುಕೊಂಡ ಹಣ ವಾಪಸ್ ಸಿಗುವದೂ ಅನುಮಾನವೇ ಎಂಬ ಮಾತುಗಳೂ ಹರಿದಾಡುತ್ತಿವೆ.