ವಿಜಯಸಾಕ್ಷಿ ಸುದ್ದಿ, ಲಕ್ನೋ
ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸದ್ದು ಜೋರಾಗಿದೆ. ಸಾವು- ನೋವುಗಳು ಹೆಚ್ಚಾಗಿಯೇ ಕಂಡು ಬರುತ್ತಿದೆ. ಈ ಸಂದರಭದಲ್ಲಿ ಮಾನವೀಯತೆ ಕೂಡ ಮರೆಯಾಗುತ್ತಿದೆ. ಹಲವೆಡೆ ಸೋಂಕಿತರ ಮೃತ ದೇಹದ ಬಗ್ಗೆ ಭಯ, ಆತಂಕ ಇನ್ನೂ ದೂರವಾಗುತ್ತಿಲ್ಲ. ಸೋಂಕಿತನ ಮೃತದೇಹವನ್ನು ಸಂಬಂಧಿಕರು ನದಿಗೆ ಎಸೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬಲರಾಮಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನದಿಗೆ ಎಸೆದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿ ಹಿಂದೆಯೇ ಈ ಘಟನೆ ನಡೆದಿದೆ. ಪೊಲೀಸರು ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.
ಅಲ್ಲಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ. ವಿಜಯ್ ಬಹದ್ದೂರ್ ಸಿಂಗ್ ಅವರ ಹೇಳಿಕೆಯಂತೆ, ವಿಡಿಯೋ ವೈರಲ್ ಆದ ನಂತರ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸಿದ್ಧಾರ್ಥ್ ನಗರದ ನಿವಾಸಿ ಪ್ರೇಮನಾಥ್ ಮಿಶ್ರಾ ಎಂಬುವವರ ಮೃತ ಇದು ಎಂದು ತಿಳಿದು ಬಂದಿದೆ.
ಮಿಶ್ರಾ ಅವರು ಕೊರೊನಾದಿಂದಾಗಿ ಮೇ. 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ. 28ರಂದು ಸಾವನ್ನಪ್ಪಿದ್ದರು. ಕೊರೊನಾ ಮಾರ್ಗಸೂಚಿಗಳಂತೆಯೇ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.
ಕೊರೊನಾ ಸೋಂಕಿತನ ಮೃತದೇಹದ ಜೊತೆಗೆ ಇಬ್ಬರು ಇದ್ದಾರೆ. ಪಿಪಿಇ ಕಿಟ್ ಧರಿಸಿರುವ ಈ ವ್ಯಕ್ತಿಗಳಲ್ಲಿನ ಒಬ್ಬರು ಮೃತ ದೇಹವನ್ನು ನದಿಗೆ ಎಸೆದಿದ್ದಾರೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.