ವಿಜಯಸಾಕ್ಷಿ ಸುದ್ದಿ, ಗದಗ
ಕೋವಿಡ್ ಸೋಂಕಿನಿಂದ ಮೃತರಾದ ಕುಟುಂಬದ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ನಿರ್ವಹಿಸಬೇಕು. ಸರ್ಕಾರದ ಒಂದಿಲ್ಲೊಂದು ಯೋಜನೆಯಲ್ಲಿ ಸೋಂಕಿನಿಂದ ಮೃತ ಕುಟುಂಬದ ಸದಸ್ಯರಿಗೆ ಪ್ರಯೋಜನವಾಗಬೇಕು. ಮೃತ ವ್ಯಕ್ತಿಯ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಸೌಲಭ್ಯ ದೊರೆಯುವಂತೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ನಿರ್ದೇಶನ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿ ಬಲಹೀನವಾಗಿದೆ. ಜಿಲ್ಲೆಯ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಂಸ್ಥೆಯ ಮುಖ್ಯಸ್ಥರಿಗೆ ಈಗಾಗಲೇ ಸೂಚನೆ ನೀಡಿರುವಂತೆ ಇನ್ನೆರಡು ತಿಂಗಳು ಆರ್ಥಿಕವಾಗಿ ಅಸಹಾಯಕವಾಗಿರುವ ಕುಟುಂಬಗಳಿಂದ ಸಾಲದ ಕಂತು ವಸೂಲಿ ಮಾಡದಿರುವಂತೆ ತಿಳಿಸಲಾಗಿದೆ.
ತಹಶೀಲ್ದಾರರು ಸ್ಥಳೀಯವಾಗಿ ಹಣಕಾಸು ಸಂಸ್ಥೆಯವರೊಂದಿಗೆ ಚರ್ಚಿಸಿ ಸಾಲದ ಕಂತು ಮರುಪಾವತಿಗೆ ಕಾಲಾವಕಾಶ ನೀಡುವಂತೆ ತಿಳಿಸಲು ನಿರ್ದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ , ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನಿಲಕುಮಾರ್ ಮುದ್ದಾ , ನಗರಸಭೆಯ ಪೌರಾಯುಕ್ತ ರಮೇಶ ಜಾಧವ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.