ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ
ಕೋಳಿ ಊಟಕ್ಕೆ ಆಹ್ವಾನ ನೀಡಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ ಕೃಷ್ಣನಾಯ್ಕ (55) ಹತ್ಯೆಯಾದ ವ್ಯಕ್ತಿ. ಇದೇ ಗ್ರಾಮದ ರಂಗಪ್ಪ ಎಂಬ ವ್ಯಕ್ತಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.
ಮೃತ ಕೃಷ್ಣನಾಯ್ಕ ಹಾಗೂ ಆರೋಪಿ ರಂಗಪ್ಪ ಕುಚುಕು ಗೆಳೆಯರಾಗಿದ್ದರು. ಇಬ್ಬರೂ ಸೇರಿಕೊಂಡು ಪ್ರತಿದಿನ ಮದ್ಯ ಸೇವಿಸುತ್ತಿದ್ದರು. ಜೂನ್ 23ರ ರಾತ್ರಿ ಇಬ್ಬರೂ ಮದ್ಯ ಸೇವೆನೆ ಮಾಡಿಕೊಂಡು ಮನೆಗೆ ಆಗಮಿಸಿದ್ದು, ಮನೆಯಲ್ಲಿ ರಾತ್ರಿ ಊಟಕ್ಕೆ ಕೋಳಿ ಸಾಂಬಾರು ಮಾಡುವಂತೆ ಕೃಷ್ಣನಾಯ್ಕ ಪತ್ನಿಗೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಕೃಷ್ಣನಾಯ್ಕ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತ ರಂಗಪ್ಪನಿಗೆ ತಿಳಿಸಿ ಮತ್ತೆ ಮನೆಗೆ ಮರಳಿದ್ದನು. ಈ ಸಂದರ್ಭದಲ್ಲಿ ರಂಗಪ್ಪ ಕೋಳಿ ಸಾಂಬಾರನ್ನು ಸಂಪೂರ್ಣ ತಿಂದು ಕುಳಿತಿದ್ದನು. ಇದರಿಂದ ಕುಪಿತಗೊಂಡ ಕೃಷ್ಣನಾಯ್ಕ ಹಾಗೂ ರಂಗಪ್ಪನ ನಡುವೆ ಗದ್ದಲ ಉಂಟಾಗಿದೆ. ಪರಿಣಾಮ ರಂಗಪ್ಪ ಕೃಷ್ಣನಾಯ್ಕನಿಗೆ ಕುಡುಗೋಲಿನಿಂದ ಕೊಲೆಗೈದು ಪರಾರಿಯಾಗಿದ್ದ.
ಈ ಕುರಿತು ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾ ಚರಣೆ ಕೈಗೊಳ್ಳಲಾಗಿತ್ತು. ಘಟನೆಗೆ ಸಂಭಂದಿಸಿದಂತೆ ರಾಮಾಪುರ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಹಂದಿಯೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.