ವಿಜಯಸಾಕ್ಷಿ ಸುದ್ದಿ, ಗದಗ:
ಸ್ಮಶಾನದಲ್ಲಿ ಶವಗಳನ್ನು ಹೂಳುವುದು, ಸುಡುವುದು ಸಂಪ್ರದಾಯ. ಆದರೆ ಅದೇ ಸ್ಮಶಾನಕ್ಕೆ ಕೊಳ್ಳಿ ಇಟ್ಟಿರುವ ಘಟನೆ ಮಂಗಳವಾರ ಗದಗ ಬೆಟಗೇರಿ ಅವಳಿ ನಗರದಲ್ಲಿ ನಡೆದಿದೆ.
ಬೆಟಗೇರಿಯ ಹೈಟೆಕ್ ಮುಕ್ತಿಧಾಮಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ಸ್ಮಶಾನಕ್ಕೆ ಮುಕ್ತಿ ಕೊಡುವ ಪ್ರಯತ್ನ ನಡೆಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ 22 ಎಕರೆ ವಿಶಾಲವಾದ ಸ್ಮಶಾನದ ಅರ್ಧ ಭಾಗ ಸುಟ್ಟು ಕರಕಲಾಗಿದೆ.
ಈ ಹಿಂದೆ ಎಚ್.ಕೆ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲಾಗಿತ್ತು. ನಗರದ ಮಧ್ಯಭಾಗದ ಉದ್ಯಾನ ಮೀರಿಸುವಂತೆ ಸ್ಮಶಾನದಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಬೋರವೆಲ್ ಕೊರೆಯಿಸಿ ನೀರಿ ವ್ಯವಸ್ಥೆ ಮಾಡಲಾಗಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸ್ಮಶಾನ ಅಕ್ಷರಶಃ ಸ್ಮಶಾನವಾಗಿ ಕಾಣುವಂತಾಗಿದೆ.
ಆಕಸ್ಮಿಕ ಬೆಂಕಿಗೆ ಸ್ಮಶಾನದ ಹುಲ್ಲು, ಗಿಡಮರಗಳು, ನೀರಿನ ಪೈಪ್ ಲೈನ್ ಸುಟ್ಟು ಹಾಳಾಗಿದೆ. ಕೋಟ್ಯಾಂತರ ರೂ. ವ್ಯಯಿಸಿ ಅಭಿವೃದ್ಧಿ ಪಡಿಸಿದ ಸ್ಮಶಾನ ಕಿಡಿಗೇಡಿಗಳ ಕೃತ್ಯಕ್ಕೆ ಆಹುತಿಯಾಗುದೆ.
ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಬೆಟಗೇರಿ ಮುಕ್ತಿಧಾಮ ನಿರ್ವಹಣೆ ಸಮಿತಿ ಅಧ್ಯಕ್ಷ, ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ, ಕಿಡಿಗೇಡಿಗಳು ಸ್ಮಶಾನಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಮಶಾನದಲ್ಲಿ ಅಳವಡಿಸಿದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಾರ್ಚ್ 3 ರಂದು ಪೊಲೀಸರಿಗೆ ದೂರು ನೀಡಲಾಗುವುದು. ಬೆಟಗೇರಿ ಸ್ಮಶಾನದ ಇತಿಹಾಸದಲ್ಲೆ ಇಂಥ ಘಟನೆ ನಡೆದಿಲ್ಲ ಎಂದರು.