ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ
ಇತ್ತೀಚೆಗೆ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ತುಸು ಹೆಚ್ಚಾಗಿದೆ. ಇದರಿಂದ ಜನರು ಹೈರಾಣಾಗುತ್ತಿದ್ದಾರೆ.
ರೈತ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾನೆ. ಇದರೊಂದಿಗೆ ಹಂದಿ ಹಾವಳಿಯೂ ಹೊಸದಾಗಿ ಸೇರಿಕೊಂಡಂತೆ ಕಾಣುತ್ತಿದೆ.
ತಾಲ್ಲೂಕಿನ ಗೋವನಾಳ ಗ್ರಾಮದ ರೈತ ಚಂದ್ರಗೌಡ್ರ ಕರೆಗೌಡ್ರ ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಗೋವಿನಜೋಳ ಇನ್ನೇನೂ ಫಲ ಕೊಡುವ ಹಂತಕ್ಕೆ ಬಂದಿತ್ತು. ಆದರೆ, ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ಹಂದಿಗಳು ರಾತ್ರೋರಾತ್ರಿ ತಿಂದು ಹಾಳು ಮಾಡಿವೆ. ಇದರಿಂದ ರೈತ ಸಂಕಷ್ಟಕೀಡಾಗಿದ್ದಾನೆ.
ತಾಲೂಕಿನಲ್ಲಿ ಹಲವು ರೈತರ ಜಮೀನುಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಬೆಳೆದು ನಿಂತ ಅಳಿದುಳಿದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಹಗಲು ರಾತ್ರಿ ಹಂದಿ ಕಾಯುವ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ರೈತರ ಹೊಲದಲ್ಲಿರುವ ಬೆಳೆ ನಾಶ ಮಾಡುತ್ತಿರುವ ಹಂದಿಗಳಿಂದ ಮುಕ್ತಿ ನೀಡಬೇಕೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.