ವಿಜಯಸಾಕ್ಷಿ ಸುದ್ದಿ, ವಿಜಯನಗರ
ಕೊರೊನಾ ಹಾವಳಿ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಿದೆ. ಹೀಗಾಗಿ ಪ್ರವಾಸಿಗರು ಹಂಪಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿಯೇ ಕಳೆದ ಎರಡು ತಿಂಗಳುಗಳಿಂದ ಹಂಪಿ ದೇವಾಲಯ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಸದ್ಯ ತೆರವುಗೊಂಡಿರುವುದರಿಂದಾಗಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 5ರ ವರೆಗೆ ಸ್ಮಾರಕಗಳ ವೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜನರು ಬೆಳಿಗ್ಗೆಯೇ ಹಂಪಿಯತ್ತ ದೌಡಾಯಿಸುತ್ತಿದ್ದಾರೆ.
ಹಂಪಿಯಲ್ಲಿನ ವಿಶ್ವಪ್ರಸಿದ್ಧ ಸ್ಮಾರಕಗಳಾದ ವಿಜಯವಿಠ್ಠಲ ದೇವಸ್ಥಾನ, ಆವರಣದಲ್ಲಿನ ಸಪ್ತಸ್ವರ ಮಂಟಪ, ಕಲ್ಲಿನ ರಥ, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪ, ಕಡಲೆ ಕಾಳು ಗಣಪ ಸೇರಿದಂತೆ ಇನ್ನಿತರ ಪ್ರದೇಶಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದಾರೆ. ಹೀಗಾಗಿ ಸ್ಮಾರಕಗಳ ಪ್ರವೇಶ ದ್ವಾರದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದವರಿಗೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದು, ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಒಬ್ಬೊಬ್ಬರನ್ನೇ ಒಳಗೆ ಬಿಡುತ್ತಿದ್ದಾರೆ.
ನಾಲ್ಕು ಕಡೆಗಳಲ್ಲಿ ಟಿಕೆಟ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಬಾರದಂತೆ ಆನ್ ಲೈನ್ ಟಿಕೆಟ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.