ಹಣದ ಕೊರತೆ: ‘ಪಶು ವಿವಿ ನರಳಾಟ! ಸರ್ಕಾರದ ನಿರ್ಲಕ್ಷ್ಯ, ವಿವಿ ಚಟುವಟಿಕೆಗಳು ಸ್ಥಗಿತ

0
Spread the love

360 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಮನವಿಹೆಚ್ಚಿನ ಅನುದಾನ ಕೊಡಿಸುವುದಾಗಿ ಸಚಿವರ ಭರವಸೆ

Advertisement

ಓಂಕಾರ ಮಠಪತಿ

ವಿಜಯಸಾಕ್ಷಿ ಸುದ್ದಿ, ಬೀದರ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಿರುವ ರಾಜ್ಯ ಸರ್ಕಾರ, ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯಕ್ಕೆ ಸಮರ್ಪಕ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಕಳೆದ 2020-21ರ ಅವ್ಯವಯದಲ್ಲಿ 738 ಕೋಟಿ ರೂ. ಅನುದಾನ ನೀಡುವಂತೆ ಪಶು ವಿಶ್ವವಿದ್ಯಾನಿಲಯ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 167 ಕೋಟಿ ರೂ. ಅನುದಾನ ಕೊಟ್ಟಿದೆ.

ಸಂಶೋಧನೆಗಾಗಿ ನೀಡಿದ್ದ 1306 ಲಕ್ಷ ರೂ. ಹಣವನ್ನು ಮರಳಿ ಪಡೆದಿದೆ. ಇದರಿಂದ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿದೆ.

ಅನುದಾನ ಕೊಡಿಸಿಲ್ಲ

ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರು ಜಿಲ್ಲೆಯವರಾಗಿದ್ದರೂ ಸಮರ್ಪಕ ಅನುದಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಪಶುಸಂಗೋಪನಾ ವಿಶ್ವವಿದ್ಯಾನಿಲಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ.
ಹಿಂದಿನ ಸರ್ಕಾರಗಳು ಸಮರ್ಪಕ ಅನುದಾನ ನೀಡುತ್ತಿದ್ದವು. ಆದರೆ, ಕಳೆದ ವರ್ಷದಿಂದ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಯವ್ಯಯದಲ್ಲಿ ಹಣ ಸರಿಯಾಗಿ ಮಂಜೂರು ಆಗುತ್ತಿಲ್ಲ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರ ಕೊಟ್ಟಿರುವ 167 ಕೋಟಿ ರೂ. ಸಿಬ್ಬಂದಿಗಳ ಸಂಬಳ ಹಾಗೂ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಖರ್ಚಾಗಿದೆ. ಸಂಶೋಧನೆ ನೇಮಕಾತಿ ಸೇರಿದಂತೆ ಎಲ್ಲವೂ ನೆನೆಗುದಿಗೆ ಬಿದ್ದಿವೆ. ಕಳೆದೊಂದು ವರ್ಷದಿಂದ ಪಶು ವಿಶ್ವವಿದ್ಯಾನಿಲಯ ಅಕ್ಷರಶ: ಸ್ತಬ್ಧವಾಗಿದೆ. ಅನುದಾನದ ಕೊರತೆಯಿಂದಾಗಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ಕೋವಿಡ್ ಕಾರಣ

ಕಳೆದ ವರ್ಷ ಕೋವಿಡ್ ಇರುವ ಕಾರಣ ಕಡಿಮೆ ಬಜೆಟ್ ಕೊಡಲಾಗಿದೆ ಎಂದು ಹೇಳುತ್ತಿರುವ ಸರ್ಕಾರ ರಾಜ್ಯದ ಉಳಿದ ಎಲ್ಲಾ ವಿಶ್ವವಿದ್ಯಾನಿಲಯಕ್ಕಿಂತ ಕಡಿಮೆ ಅನುದಾನ ನೀಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೇ.80 ರಷ್ಟು ಅನುದಾನ ಕಡಿತವಾಗಿದ್ದು, ಸಚಿವ ಪ್ರಭು ಚವ್ಹಾಣ ಅವರು ಕಾಳಜಿ ವಹಿಸುವ ಅವಶ್ಯಕತೆ ಇದೆ.

360 ಕೋಟಿ ರೂ.ಗೆ ಬೇಡಿಕೆ
ಹಣಕಾಸಿನ ತೊಂದರೆಯಿಂದಾಗಿ ಸದ್ಯ ಪಶು ವಿವಿಯಲ್ಲಿ ನೇಮಕಾತಿ, ಹೊಸ ಕಾಲೇಜುಗಳ ಸ್ಥಾಪನೆ ಸೇರಿದಂತೆ ಎಲ್ಲವೂ ನಿಂತಿವೆ. ಹಾಗಾಗಿ, 2021-22ನೇ ಸಾಲಿನಲ್ಲಿ 360 ಕೋಟಿ ರೂ. ಅನುದಾನ ಒದಗಿಸುವಂತೆ ವಿಶ್ವವಿದ್ಯಾಲಯ ಬೇಡಿಕೆ ಇಟ್ಟಿದೆ.

ಅಥಣಿ ಹಾಗೂ ಪುತ್ತೂರಿನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸುವಂತೆ ಒತ್ತಡವಿದೆ. ಆದರೆ, ಅದಕ್ಕೆ ಬೇಕಾಗಿರುವ ಹಣಕಾಸು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಸರ್ಕಾರದಿಂದ ಅನುಮತಿ ಸಿಕ್ಕ ಮೇಲೆ ಈ ಕುರಿತು ಯೋಚಿಸಲಾಗುವುದು.

ಪ್ರೊ,ನಾರಾಯಣಸ್ವಾಮಿ, ಕುಲಪತಿ, ಪಶು ವೈದ್ಯಕೀಯ ವಿವಿ ಬೀದರ

ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾನಿಲಯಕ್ಕೆ ಕಳೆದ ವರ್ಷ ಅತ್ಯಂತ ಕಡಿಮೆ ಬಜೆಟ್ ಅನುಮೋದನೆಗೊಂಡಿದ್ದು ಗಮನಕ್ಕಿದೆ. ೨೦೨೦-೨೧ಸಾಲಿಗೆ ಪಶು ವಿವಿ ಅವರು ೩೬೦ ಕೋಟಿ ರೂ. ಅನುದಾನ ಕೇಳಿದ್ದಾರೆ. ಈ ವರ್ಷದ ಅಯವ್ಯಯದಲ್ಲಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ.

ಪ್ರಭು ಚವ್ಹಾಣ, ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಪ್ರಭು ಚವ್ಹಾಣ, ಸಚಿವರು

Spread the love

LEAVE A REPLY

Please enter your comment!
Please enter your name here