ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕೊರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಲಾಗಿದೆ. ಸದ್ಯ ಲಾಕ್ ಡೌನ್ ನ್ನು ಮೇ. 17ರ ವರೆಗೆ ಜಾರಿಯಲ್ಲಿರಲಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡ್ಮೂರು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ವಿಟಿ ದರ ಶೇ. 35 ರಿಂದ ಶೇ. 23ಕ್ಕೆ ಇಳಿಕೆಯಾಗಿದೆ. ಹೀಗಾಗಿ ಇನ್ನು ಒಂದು ವಾರಗಳ ಕಾಲ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೆಟ್ರೋ ರೈಲಿನ ಸೇವೆಯೂ ಬಂದ್ ಇರಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾವು ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಳ ಮಾಡುತ್ತಿದ್ದೇವೆ. ಆಕ್ಸಿಜನ್ ಬೆಡ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ದೆಹಲಿಯಲ್ಲಿ ಆಕ್ಸಿಜನ್ ಪರಿಸ್ಥಿತಿ ಸುಧಾರಿಸಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ದೂರವಾಣಿ ಕರೆಗಳೂ ಕಡಿಮೆಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಯುವಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇದೀಗ ಲಸಿಕೆಯ ಕೊರತೆಯಿದೆ. ಆದರೆ, ಕೇಂದ್ರ ಸರ್ಕಾರ ಸಹಾಯ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಏ. 20ರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ಜಾರಿಯಿಂದ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದ್ದು, ಈ ಕಾರಣದಿಂದ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೇ. 3 ರಿಂದ ಮೇ. 8ರ ವರೆಗೆ ದೆಹಲಿಯಲ್ಲಿ 1,15,285 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ 2,105 ಜನರು ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ.