ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ಕಳೆದ ವಾರ ಪ್ರಾರಂಭವಾಗಿರುವ ಸಿಸಿಐ ಬೆಂಬಲ ಬೆಲೆ ಹತ್ತಿ ಖರೀದಿ ಕೇಂದ್ರಕ್ಕೆ ದಿನದಿಂದ ದಿನಕ್ಕೆ ರೈತರು ತಮ್ಮ ಹತ್ತಿಯನ್ನು ಮಾರಾಟಕ್ಕೆ ತರುತ್ತಿದ್ದು, ಖರೀದಿ ಕೇಂದ್ರದ ಬಳಿ ರೈತರು ಮತ್ತು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ಗುರುವಾರವು ಹತ್ತಿ ಖರೀದಿ ಕೇಂದ್ರಕ್ಕೆ ಬೆಳಿಗ್ಗೆಯಿಂದಲೇ ಆಗಮಿಸಿದ್ದು, ಹತ್ತಿ ಸಂಗ್ರಹಣೆಗೆ ಜಾಗ ಇಲ್ಲದೆ ಖರೀದಿ ಮರುದಿವಸಕ್ಕೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ನೂರಾರು ರೈತರು ಎಪಿಎಂಸಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ನಿತ್ಯ ಹತ್ತಿಯನ್ನು ತರುತ್ತಿದ್ದು, ಅವರಿಗೆ ದಿನಕ್ಕೆ ಇಷ್ಟೇ ಖರೀದಿ ಎಂದು ತಾಕೀತು ಮಾಡಿದರೆ ಹೇಗೆ ಎಂದರಲ್ಲದೆ, ಖರೀದಿಸಿದ ಹತ್ತಿಯನ್ನು ಸಂಗ್ರಹಿಸಲು ಒಂದೇ ಹತ್ತಿ ಫ್ಯಾಕ್ಟರಿಯನ್ನು ಮಾಡಲಾಗಿದ್ದು, ಅಲ್ಲಿ ಸಂಗ್ರಹಣೆಗೆ ಜಾಗ ಇಲ್ಲ ಎಂದು ಹೇಳುತ್ತಿರುವದಕ್ಕೂ ಸಹ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಮತ್ತೊಂದು ಫ್ಯಾಕ್ಟರಿಗೆ ಅನುಮತಿ ನೀಡಿ, ಇಲ್ಲವೆ ಹತ್ತಿ ಸಂಗ್ರಹಣೆಗೆ ಗೋದಾಮು ನೀಡಿ ರೈತರಿಗೆ ಅನೂಕೂಲ ಮಾಡಿಕೊಡುವಂತೆ ಆಗ್ರಹಿಸಿದರು.
ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ಅವರು ರೈತರೊಂದಿಗೆ ಮಾತನಾಡಿ, ಈ ಕುರಿತಂತೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದರು. ಅಲ್ಲದೆ ಫ್ಯಾಕ್ಟರಿಗೂ ಅನುಮತಿ ನೀಡುವಂತೆ ಕ್ರಮ ಕೈಗೊಳ್ಳುವದಾಗಿ ಹೇಳಿ ರೈತರನ್ನು ಸಮಾಧಾನಪಡಿಸಿದರು.
ಈ ಸಂದರ್ಭದಲ್ಲಿ ಶಂಕರಪ್ಪ ಸೊರಟೂರ, ಅರುಣ ಜಾಲಗಾರ, ಕುಮಾರ ಗೌಡರ, ಮಂಜುನಾಥ, ವಿರುಪಾಕ್ಷಗೌಡ ಎಸ್.ಎಂ. ಗರಡ್ಡಿ, ಮಹೇಶ ವಿ.ಪಿ., ವಿ.ಬಿ. ಪಲ್ಲೇದ, ಐ.ಎ. ವಾರದ, ಎಚ್.ಎಸ್. ಶಿರೋಳ, ವಿ.ಸಿ. ಕಿತ್ತೂರ, ಯ.ರ. ಜಾಲವಾಡಗಿ, ಅಬ್ದುಲ್ ಎಚ್., ಮಾಯಪ್ಪ ದಾಸ, ಸಿದ್ದಪ್ಪ ಸುಳ್ಳದ, ವಿ.ಸಿ. ಮೇಲ್ಮುರಿ ಮುಂತಾದವರಿದ್ದರು.