ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯೂಯು ಮತ್ತು ಎಐಡಿಡಬ್ಲ್ಯೂಎ ಸಂಘಟನೆಗಳ ನಿಯೋಗವು ಹತ್ರಾಸ್‌ನ ಗುಲರಿ ಗ್ರಾಮಕ್ಕೆ ಅ. ೪ರಂದು ಭೇಟಿ ನೀಡಿ ಮೃತ ಯುವತಿಯ ಕುಟುಂಬಕ್ಕೆ ಬೆಂಬಲ ಹಾಗೂ ಸೌಹಾರ್ದದ ಭರವಸೆ ನೀಡಿತ್ತು.
ಉನ್ನಾವೋ ಮಾದರಿಯ ಪ್ರಕರಣಗಳು ಹೆಚ್ಚುತ್ತಿದ್ದು, ಯೋಗಿ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಅಪರಾಧೀಕರಣದ ಆಳ್ವಿಕೆಯನ್ನು ಬಲಪಡಿಸುತ್ತಿದೆ. ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜ್ಯವು ಮೇಲ್ಜಾತಿ ಭೂಮಾಲಕ ಶಕ್ತಿಗಳ ಪ್ರಯೋಗಾಲಯವಾಗಿದೆ. ದಲಿತರನ್ನು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವವರನ್ನು ಹೆದರಿಸಲಾಗುತ್ತಿದೆ. ಇದರ ವಿರುದ್ಧ ನಿರಂತರ ಹೋರಾಟಗಳ ಭಾಗವಾಗಿ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯು ಸಂಘಟನೆಗಳ ಜಂಟಿ ಸಭೆಯನ್ನು ನಡೆಸಲಾಗಿದ್ದು, ದಲಿತರು, ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮೇಲಿನ ದಮನ, ದೌರ್ಜನ್ಯಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಭಾಗವಾಗಿ ಕೊಪ್ಪಳ ತಾಲೂಕು ಜಂಟಿ ಕ್ರಿಯಾ ಸಮಿತಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ನ್ನು ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಜಾರಿ ಮಾಡಲಿಲ್ಲ ಆದರೆ ಬಿಜೆಪಿ ಸರ್ಕಾರ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಹತ್ರಾಸ್‌ನಲ್ಲಿ ೧೯ರ ಹರೆಯದ ದಲಿತ ಯುವತಿಯನ್ನು ಮೇಲ್ಜಾತಿ ಭೂಮಾಲೀಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಅಮಾನುಷ ಕೃತ್ಯ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಬೇಡಿಕೆಗಳು
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಗದಿತ ಅವಧಿಯಲ್ಲಿ ಹತ್ರಾಸ್ ಪ್ರಕರಣದ ಪರಿಣಾಮಕಾರಿ ತನಿಖೆ ಮಾಡಬೇಕು. ಕರ್ತವ್ಯ ನಿರ್ವಹಿಸದ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಗರಿಷ್ಠ ರಕ್ಷಣೆ ನೀಡಬೇಕು. ಎಲ್ಲ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೌರ್ಜನ್ಯಕ್ಕೊಳಗಾದವರ ಕುಟುಂಬಗಳಿಗೆ ಕೃಷಿ ಭೂಮಿ ಮತ್ತು ವಾಸಕ್ಕೆ ಮನೆಗಳು ಒದಗಿಸಬೇಕು. ಎಲ್ಲರಿಗೂ ಉದ್ಯೋಗವನ್ನು ಮತ್ತು ಕನಿಷ್ಠ ವೇತನವನ್ನು ಖಚಿತಪಡಿಸಬೇಕು. ಮೀಸಲಾತಿ, ದಲಿತರ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಿಐಟಿಯು ಸಂಘಟನೆಯ ಕಾಸಿಂ ಸರ್ದಾರ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ಅಂದಪ್ಪ ಬರದೂರು, ಹುಸೇನಸಾಬ ನದಾಫ್, ಸಂಜಯ್ ದಾಸ, ಹುಲುಗಪ್ಪ ಗೋಕಾವಿ, ?ಣ್ಮುಖಪ್ಪ ಹಿರೇಬೀಡನಾಳ, ಉಮೇಶ ಬಳಗೇರಿ, ಇಸ್ಮಾಯಿಲ್ ಅಗಳಕೇರಾ, ವೆಂಕಟೇಶ ಅಗಳಕೇರಾ, ಬಿ. ಕಂಠಿಬಸವೇಶ್ವರ, ನಿಂಗಪ್ಪ ಹಳ್ಳಿ, ಅಮೀನಾ ಬೇಗಂ, ಉಸ್ಮಾನ ಸಾಬ, ಅಕ್ಕಮ್ಮ ಗೊಲ್ಲರ, ಬಂದಮ ಹಕಾರಿ, ಗಂಗವ್ವ, ರೇಣುಕವ್ವ ಇಡಕಲ್, ನಿಂಗಪ್ಪ ಪುರದ, ಹನುಮಪ್ಪ ಗೌಡ್ರ, ಭರಮಣ್ಣ ಭೀಮನೂರು, ಫಕೀರಮ್ಮ ಮಿರಗನತಾಂಡಿ, ಯಮುನಾ ಹೊಸಮನಿ, ಶೃತಿ ಆದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.