ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕಂಪ್ಲಿ
ತಾಲೂಕಿನ ನಂ. 10 ಮುದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಬರುವ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬಾ ಮಳೆ ನೀರು ಸಂಗ್ರಹವಾಗಿ ರಸ್ತೆಯೇ ಮಾಯವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚರಿಸುವುದು ಹೇಗೆಂದು ಗ್ರಾಮದ ಯುವಕರು ದಿಢೀರ್ ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉಗ್ರ ಹೋರಾಟದ ಎಚ್ಚರಿಸಿಕೆ ನೀಡಿದ್ದಾರೆ.
ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಎರಡು ಮಾರ್ಗಗಳಿದ್ದು, ಒಂದು ಗ್ರಾಮದಿಂದ ರಾಮಸಾಗರ ಮುಖಾಂತರ ಮತ್ತೊಂದು ಗ್ರಾಮದಿಂದ ಸಿದ್ದೇಶ್ವರ ಕ್ರಾಸ್ ಮೂಲಕ ಕಂಪ್ಲಿಗೆ ಸಂಪರ್ಕಿಸುತ್ತದೆ. ಆದರೆ ಗ್ರಾಮದಿಂದ ಈ ಎರಡು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಯೇ ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರ ಹೇಗೆಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ರಸ್ತೆಯನ್ನು ನೋಡಿದರೆ, ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ ಎನ್ನುವಂತಾಗಿದ್ದು, ಇದೀಗ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ರಸ್ತೆಯೇ ಮಾಯವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸುತ್ತಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಅಸಮಧಾನ ವ್ಯಕ್ತ ಪಡಿಸಿದ ಗ್ರಾಮಸ್ಥರು ಕೂಡಲೇ ತಾಲ್ಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹದಗೆಟ್ಟ ರಸ್ತೆಯ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ಚಿತ್ರಗಳನ್ನು, ರಸ್ತೆಯ ದುಸ್ಥಿತಿಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪರಶುರಾಮ, ಜಗದೀಶ್, ಸಂತೋಷ್, ಯು.ನಾಗಪ್ಪ, ಟಿ.ರಮೇಶ್ ಸೇರಿದಂತೆ 30 ರಿಂದ 40 ಜನ ಭಾಗವಹಿಸಿದ್ದರು.
ಹದಗೆಟ್ಟ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆ
Advertisement