ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಬಡ್ನಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹನಮಂತ ದೇವರ ರಥೋತ್ಸವ ಜರುಗುತ್ತಿರುವುದನ್ನು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ನೇತೃತ್ವದಲ್ಲಿ ಪೊಲೀಸರು ತಡೆದು, ಜಾತ್ರೆ ಬಂದ್ ಮಾಡಿಸಿದರು.

ಕೊರೊನಾ ಅಲೆ ನಿಯಂತ್ರಿಸಲು ಸರ್ಕಾರ ಜಾತ್ರೆಗಳನ್ನು ರದ್ದು ಪಡಿಸಿದ್ದರೂ ಮಂಗಳವಾರ ಬಡ್ನಿ ಗ್ರಾಮದಲ್ಲಿ ನೂರಾರು ಭಕ್ತರು ಸೇರಿ ರಥೋತ್ಸವ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಸುದ್ದಿ ತಿಳಿದ ತಹಸೀಲ್ದಾರರು ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜತೆಗೆ ಗ್ರಾಮಕ್ಕೆ ದೌಡಾಯಿಸಿ ಜಾತ್ರೆಯನ್ನು ತಡೆದಿದ್ದಾರೆ.
ಉಪತಹಸೀಲ್ದಾರ ಎಂ.ಜಿ. ದಾಸಪ್ಪನವರ, ಪಿಎಸ್‌ಐ ಶಿವಯೋಗಿ ಲೋಹಾರ, ಬಿ.ಎಂ. ಕಾತರಾಳ, ಪ್ರಶಾಂತ ಸನದಿ, ಎಂ.ಆರ್. ಮಾದರ, ಪಾಂಡುರಂಗ ರಾವ್ ಉಪಸ್ಥಿತರಿದ್ದರು.
ಜಾತ್ರೆ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಗ್ರಾಮಸ್ಥರು ಯಾವುದೇ ಮಾಹಿತಿ ನೀಡದೆ, ಮಾಸ್ಕ್, ಅಂತರ ಕಾಯದೆ ಮಂಗಳವಾರ ಜಾತ್ರೆ ನಡೆಸಲು ಮುಂದಾಗಿದ್ದರು. ಮಾಹಿತಿ ಹಿನ್ನೆಲೆ ಜಾತ್ರೆ ತಡೆಯಲಾಗಿದೆ. ದೇವಸ್ಥಾನ ಕಮಿಟಿಯವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಕರ್ಫ್ಯೂ ಸಂದರ್ಭದಲ್ಲಿ ಜಾತ್ರೆ ಇರುವ ಬಗ್ಗೆ ಮಾಹಿತಿ ಇದ್ದು, ಕದ್ದುಮುಚ್ಚಿ ಜಾತ್ರೆ, ಮದುವೆ, ಇತರೇ ಕಾರ್ಯಕ್ರಮ ಮಾಡಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದರು.