ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಹಾಮಾರಿ ಮೆಟ್ಟಿ ನಿಲ್ಲುವುದಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸೆಲೆಬ್ರಿಟಿಗಳು ಇಂತಹ ಜನರ ಬದುಕಿಗೆ ಆಸರೆಯಾಗಿ ನಿಲ್ಲುತ್ತಿದ್ದಾರೆ. ಸದ್ಯ ಈ ಸಾಲಿಗೆ ನಟ ಶಿವರಾಜ್ ಕುಮಾರ್ ಸೇರಿದ್ದಾರೆ.
ಹಸಿವಿನಿಂದ ಪರಿತಪಿಸುತ್ತಿರುವ ಕಾರ್ಮಿಕರಿಗೆ ಹಾಗೂ ಬಡವರಿಗೆ ಶಿವರಾಜ್ ಕುಮಾರ್ ಪ್ರತಿ ದಿನ ಊಟ ಹಾಕಿ ಹಸಿವು ನೀಗಿಸುತ್ತಿದ್ದಾರೆ.
ನಾಗವಾರದಲ್ಲಿನ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಯಿಂದ ನಡೆಯುತ್ತಿದೆ.
ಶಿವರಾಜ್ ಕುಮಾರ್ ಅವರು ‘ಆಸರೆ’ ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಪ್ರತಿ ದಿನ ಅಗತ್ಯವಿದ್ದವರಿಗೆ ಊಟ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಲಾಕ್ ಡೌನ್ ಜಾರಿಯಾದ ದಿನದಿಂದಲೂ ಶಿವರಾಜ್ ಕುಮಾರ್ ಅವರು ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ಬೊಲೇರೋ ಕ್ಯಾಂಟ್ರೋವೊಂದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರ ಬಳಿಯೇ ಊಟ, ತಿಂಡಿ ವಿತರಿಸಲಾಗುತ್ತಿದೆ. ‘ಆಸರೆ’- ‘ಹಸಿದ ಹೊಟ್ಟೆಗೆ ಕೈ ತುತ್ತು’ ಅನ್ನೋ ಶೀರ್ಷಿಕೆಯಡಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಡ ಜನರಿಗೆ ಸಹಾಯ ಮಾಡಲು ಶಿವಣ್ಣ ಮುಂದಾಗಿದ್ದಾರೆ.