ವಿಜಯಸಾಕ್ಷಿ ಸುದ್ದಿ, ಹಾವೇರಿ
ಇತ್ತೀಚೆಗಷ್ಟೇ ಬಿಜೆಪಿಯ ಹಿರಿಯ ಶಾಸಕ ಸಿ.ಎಂ. ಉದಾಸಿ ನಿಧನರಾಗಿದ್ದು, ಅವರ ಸಾವಿನಿಂದಾಗಿ ಹಾನಗಲ್ ವಿಧಾನಸಭಾ ಕ್ಷೇತ್ರ ತೆರವುಗೊಂಡಿದೆ. ಹೀಗಾಗಿ ಟಿಕೆಟ್ ಫೈಟ್ ಈಗನಿಂದಲೇ ಶುರುವಾಗಿದೆ.
ಉಪಚುನಾವಣೆ ಘೋಷಣೆಗೂ ಮುನ್ನವೆ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಹಾವೇರಿ ಜಿಲ್ಲೆಯಲ್ಲಿನ ಹಾನಗಲ್ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ಪ್ರಾರಂಭವಾಗಿದೆ.
ಮಾಜಿ ಸಚಿವ ಮನೋಹರ ತಹಶೀಲ್ದಾರ ನೇತೃತ್ವದಲ್ಲಿ ನಿನ್ನೆ ಕೆಲವು ಕಾಂಗ್ರೆಸ್ ಕಾರ್ಯರ್ತರು ಹಾಗೂ ಮುಖಂಡರ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಹಾನಗಲ್ ತಾಲೂಕಿನವರಿಗೆ ಪಕ್ಷದ ಟಿಕೆಟ್ ನೀಡುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಗೆ ಪಕ್ಷದ ಟಿಕೆಟ್ ನೀಡದಂತೆ ಪರೋಕ್ಷವಾಗಿ ಸಭೆಯಲ್ಲಿ ಎಚ್ಚರಿಸಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ತಾಲೂಕಿನ ಯಾರಿಗಾದರೂ ಟಿಕೆಟ್ ನೀಡುವಂತೆ ಗ್ರಾಮ ಮಟ್ಟದಿಂದ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.
ತಾಲೂಕಿನವರನ್ನು ಬಿಟ್ಟು ಪಕ್ಷವು ಬೇರೆಯವರಿಗೆ ಟಿಕೆಟ್ ನೀಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಲಾಯಿತು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ಗೆ ಎಚ್ಚರಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಗೆ ಪಕ್ಷವು ಟಿಕೆಟ್ ನೀಡಿರಲಿಲ್ಲ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ಮಾನೆಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಸೋಲು ಕಂಡಿದ್ದರು. ಸೋಲಿನ ನಂತರವೂ ಮಾನೆ, ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ಸಂಘಟನೆಯಲ್ಲಿ ತೊಡಗಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮನೋಹರ ತಹಶೀಲ್ದಾರ ಸದ್ಯ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಕಳೆದ ಬಾರಿ ಸೋತಿರುವ ಶ್ರೀನಿವಾಸ್ ಮಾನೆ ಹಾಗೂ ಹಲವು ಮುಖಂಡರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ.

