ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ದೇಶಾದ್ಯಂತ ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಈ ಅಲೆಗೆ ಯುವ ಸಮುದಾಯವೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದೆ. ಸುಮಾರು 35 ರಿಂದ 45 ವರ್ಷ ವಯಸ್ಸಿನೊಳಗಿನವರಲ್ಲಿಯೇ ಸೋಂಕಿನ ಗಂಭೀರತೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ರೂಪಾಂತರಿ ಕೊರಾನಾದಿಂದಾಗಿ ಯುವಕರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಯುವಕರ ರಕ್ತದಲ್ಲಿ ಅಥವಾ ದೇಹದಲ್ಲಿ ಆಮ್ಲಜನಕದ ಪ್ರಮಾಣ ದಿಢೀರ್ ಕುಸಿಯುವ ‘ಹ್ಯಾಪಿ ಹೈಪೊಕ್ಸಿಯಾ’ದಿಂದ ಯುವಕರು ಸಾವನ್ನಪ್ಪುವಂತಾಗುತ್ತಿದೆ. ಆಕ್ಸಿಮೀಟರ್ ನಿಂದ ಸೋಂಕಿತರು ನಿಯಮಿತವಾಗಿ ತಮ್ಮ ಆಮ್ಲಜನಕ ಪ್ರಮಾಣ ಚೆಕ್ ಮಾಡಿಕೊಳ್ಳುವುದೊಂದೇ ಸದ್ಯದ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಹಳಷ್ಟು ಯುವಕರಿಗೆ ತಮ್ಮ ದೇಹದ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತಿರುವುದು ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಆಮ್ಲಜನಕದ ಪ್ರಮಾಣ ಶೇ. 20 ರಿಂದ 30ರಷ್ಟು ಇಳಿಕೆ ಕಂಡಾಗಲೇ ತಿಳಿಯುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಯುವಕರ ತುಟಿಗಳ ಬಣ್ಣ ಬದಲಾಗಿ ನೀಲಿಗೆ ತಿರುಗುವುದು. ಕೈ -ಕಾಲುಗಳ ಚರ್ಮದ ಬಣ್ಣ ಕೆಂಪಾಗುವುದು. ಏಕಾಏಕಿಯಾಗಿ ವಿಪರೀತ ಬೆವರುವುದು ಕಂಡು ಬರುತ್ತಿದ್ದರೆ, ಯುವಕರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.