ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಕಣ್ಮನಿಯಾಗಿ ಸುಮಾರು 11 ವರ್ಷ 07 ತಿಂಗಳುಗಳ ಕಾಲ ಸೇವೆ ಸಲ್ಲಿಸಿ, ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿ ಇಲಾಖೆಯ ಗೌರವ ಹೆಚ್ಚಿಸಿದ್ದ ‘ಸ್ವಾತಿ ಎಂಬ ಹೆಸರಿನ ಶ್ವಾನವು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದೆ.
ಸ್ವಾತಿಯ ಅಗಲಿಕೆಗೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ವಾತಿಗೆ ಅಂತಿಮ ಗೌರವ ನಮನ ಸಲ್ಲಿಸಿದರು. ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸುವ ಮೂಲಕ ಪೊಲೀಸ್ ಇಲಾಖೆ ಸ್ವಾತಿಗೆ ಗೌರವ ವಂದನೆ ಸಲ್ಲಿಸಿತು.
‘ಲ್ಯಾಬ್ರಡರ್’ ಜಾತಿಯ ಸ್ವಾತಿ ಎಂಬ ಹೆಸರಿನ ಹೆಣ್ಣು ಶ್ವಾನವು 2011 ಸೆಪ್ಟಂಬರ್ 01 ರಂದು ಜನಿಸಿದ್ದು, 2013 ಜನೇವರಿ 01ರಂದು ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸೇರ್ಪಡೆಗೊಂಡಿತ್ತು. 11 ವರ್ಷ 07 ತಿಂಗಳ ಕಾಲ ಸ್ಫೋಟಕ ವಸ್ತು ಶ್ವಾನವಾಗಿ ಕರ್ತವ್ಯ ನಿರ್ವಹಿಸಿದ್ದ ಸ್ವಾತಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅನೇಕ ಬಾರಿ ಶ್ಲಾಘಿಸಿತ್ತು.
ಗದಗನ ನಿವೃತ್ತ ಇಂಜನೀಯರ್ ಅಶೋಕ ಬರಗುಂಡಿ ಅವರು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದ್ದ ಸ್ವಾತಿಯ ಮೇಲುಸ್ತುವಾರಿಯನ್ನು ಡಿಎಸ್‌ಪಿ ಡಿಎಆರ್ ಮತ್ತು ಆರ್‌ಪಿಐ ಡಿಎಆರ್‌ನವರು ವಹಿಸಿದ್ದರು. ಅಲ್ಲದೆ,ಎಂ.ಎಸ್.ಕುಂಬಾರ (ಎಎಚ್‌ಸಿ-229), ಎನ್.ಆರ್.ಕಂದಗಲ್ (ಎಪಿಸಿ-214) ಸ್ವಾತಿಯ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದರು.
ಸ್ವಾತಿಯು ಸುಮಾರು 10 ತಿಂಗಳುಗಳ ಕಾಲ ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿತ್ತು. ಅಲ್ಲದೆ, ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವ, ಗೋವಾ ಚಿಕ್ ಶೃಂತ ಸಭೆ, ಮುಖ್ಯಮಂತ್ರಿಗಳು ಸೇರಿದಂತೆ ವಿವಿಐಪಿ ಹಾಗೂ ವಿಐಪಿಗಳ ಅನೇಕ ಭದ್ರತಾ ಕರ್ತವ್ಯ ನಿರ್ವಹಿಸಿದ ಕೀರ್ತಿ ಸ್ವಾತಿಯದ್ದಾಗಿದೆ.
ಸ್ವಾತಿಯ ಕೊನೆಯದಾಗಿ ನಿನ್ನೆ ಅಂದರೆ ಮೇ ೧ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್‌ರವರ ಭದ್ರತಾ ಕರ್ತವ್ಯ ನಿರ್ವಹಿಸಿದ್ದ ಸ್ವಾತಿಯು ಇಂದು ಕೊನೆಯುಸಿರೆಳೆದಿದ್ದು, ಪೊಲೀಸ್ ಇಲಾಖೆಗೆ ಅತ್ಯಂತ ದುಃಖವನ್ನುಂಟು ಮಾಡಿದ್ದಾಳೆ.
ಸ್ವಾತಿಯು ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 95 ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಸುಳಿವು ನೀಡಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸ್ವಾತಿ ಇನ್ನು ನೆನಪು ಮಾತ್ರ.