ವಿಜಯಸಾಕ್ಷಿ ಸುದ್ದಿ, ಗದಗ;
ತಾಯಿ, ಮಗ ಮತ್ತು ಕಬ್ಜಾದಾರರ ನಡುವೆ ಉಂಟಾದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸ್ ಠಾಣೆಯಲ್ಲಿ ಪೊಲೀಸರ ಹೊಡೆತದಿಂದ ಗದಗ-ಬೆಟಗೇರಿಯ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟನಂತೆ ಎಂಬ ವದಂತಿ ಮೂರ್ನಾಲ್ಕು ದಿನಗಳಿಂದ ಅವಳಿ ನಗರದಲ್ಲಿ ಹರಿದಾಡುತ್ತಿದೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದ್ದಾನೆ ಎನ್ನಲಾಗುತ್ತಿರುವ ಆದರ್ಶ ನಗರದ 45 ವರ್ಷದ ವ್ಯಕ್ತಿ ಸಂತೋಷ ಅಲಿಯಾಸ್ ಸಂತೋಷ್ ಕುಮಾರ ಪೊಲೀಸರ ಹೊಡೆತದಿಂದಲೇ ಸಾವನ್ನಪ್ಪಿದ್ದರೂ, ಪೊಲೀಸರು ಅವೆಲ್ಲವನ್ನು ಮುಚ್ಚಿಹಾಕಿ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ಕಥೆ ಕಟ್ಟುತ್ತಿದ್ದಾರಂತೆ ಎಂಬ ಊಹಾಪೋಹಗಳು ಎದ್ದಿವೆ.
ಈ ಘಟನೆಯಿಂದ ಗದಗ-ಬೆಟಗೇರಿ ಅವಳಿ ನಗರದ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ದು, ಸಂತೋಷ್‌ಗೆ ನಿಜಕ್ಕೂ ಎದೆನೋವು ಕಾಣಿಸಿಕೊಂಡಿತ್ತಾ? ಅಥವಾ ಪೊಲೀಸರ ಹೊಡೆತದಿಂದಲೇ ಆತ ಸಾವನ್ನಪ್ಪಿದನಾ? ವೈದ್ಯರು ಹೇಳುವ ಪ್ರಕಾರ ಆತನಿಗೆ ಹೃದಯಾಘಾತ ಸಂಭವಿಸಿತಾ?
ಅಷ್ಟಕ್ಕೂ ನ. 4 ರಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದದ್ದಾರು ಏನು? ಪ್ರಕರಣದಿಂದ ಪಾರಾಗಲು ಪೊಲೀಸರು ಹೃದಯಾಘಾತ ಎಂಬ ಕಥೆ ಕಟ್ಟಿದರೆ? ಎಂಬ ಅವಳಿ ನಗರದ ಜನರ ಪ್ರಶ್ನೆಗೆ ಪೊಲೀಸರೇ ಉತ್ತರ ನೀಡಬೇಕಿದೆ.
ಕಬ್ಜಾದಾರನ ಹೆಂಡತಿಗೆ ಕಿರುಕುಳ?:
ಮೃತ ವ್ಯಕ್ತಿ ಸಂತೋಷನಿಗೆ ಎರಡು ಅಂತಸ್ತಿನ ಮನೆಯಿದ್ದು, ಅವರ ತಾಯಿ ತಾವಿದ್ದ ಮನೆಯಲ್ಲಿಯೇ ಕೆಳಗಿನ ಅಂತಸ್ತಿನ ಮನೆಯನ್ನು ನಾಲ್ಕು ಲಕ್ಷ ರೂ.ಗಳಿಗೆ ಬೇರೆಯವರಿಗೆ ಕಬ್ಜಾ ಕೊಟ್ಟಿದ್ದಾರಂತೆ. ಈಕೆಯ ಹಿರಿಯ ಮಗ ಸಂತೋಷ ಕಬ್ಜಾ ಕೊಟ್ಟಿರುವ ಮನೆಯನ್ನು ಬಿಡಿಸಿಕೊಳ್ಳುವಂತೆ ತನ್ನ ತಾಯಿಗೆ ಹೇಳುತ್ತಿದ್ದ. ಆಗ ತಾಯಿ, ಸದ್ಯ ಹಣವಿಲ್ಲ, ಹಣ ಕೂಡಿದ ಮೇಲೆ ಮನೆ ಬಿಡಿಸಿಕೊಳ್ಳುವುದಾಗಿ ಹೇಳಿದ್ದರಂತೆ.
ತನ್ನ ತಾಯಿ ಇಷ್ಟೆಲ್ಲ ಹೇಳಿದರೂ, ಸುಮ್ಮನಾಗದ ಸಂತೋಷ ದೀಪಾವಳಿ ಅಮಾವಾಸ್ಯೆ (ನ.೪) ರಂದು ಕಬ್ಜಾದಾರನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಆಗ ಕಬ್ಜಾದಾರನ ಹೆಂಡತಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಾಗಿ ಹೇಳಿದ್ದು, ಸಂತೋಷನೂ ದೂರು ಕೊಡುವುದಾಗಿ ಹೇಳಿ ಗದಗ ಶಹರ ಪೊಲೀಸ್ ಠಾಣೆಗೆ ಹೋಗಿದ್ದಾನೆ.
ಆಗ ಪೊಲೀಸರು, ನಿಂದೇ ತಪ್ಪು, ಪದೇ ಪದೇ ತಾಯಿ ಜೊತೆಗೆ ಜಗಳ ಮಾಡ್ತೀಯಾ, ಕಬ್ಜಾದಾರರ ಜೊತೆಗೂ ಕಿರಿಕಿರಿ ಮಾಡ್ತಿಯಾ ಅಂತ ವರಸೆ ತೋರಿಸಿದ್ದಾರೆ. ಆಗ ಆತ ಠಾಣೆಯ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಗಾಬರಿ ಬಿದ್ದ ಪೊಲೀಸರು ಜಿಮ್ಸ್ ಗೆ ಕರೆದೊಯ್ದಿದ್ದಾರೆ. ಆಗ ವೈದ್ಯರು, ಮೃತಪಟ್ಟ ಬಗ್ಗೆ ಖಚಿತ ಪಡಿಸಿದ್ದಾರೆ. ಆಗ ಪೊಲೀಸರ ಜಂಛಾಬಲವೇ ಉಡುಗಿಹೋಗಿದೆ.
ಠಾಣೆಗೆ ಬಂದದ್ದು ಎಷ್ಟು ಹೊತ್ತಿಗೆ?:
ಕೆಲವು ಮೂಲಗಳು ಹೇಳುವ ಅಂದು ಸಂಜೆ 6.40 ಗಂಟೆಗೆ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆದರೆ, ದೂರು ಕೊಡುವುದಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಬಂದಿದ್ದು ಎಷ್ಟೊತ್ತಿಗೆ? 6.40ಕ್ಕೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎಂದಾದರೆ, ಸಂತೋಷನಿಗೆ ಎದೆನೋವು ಕಾಣಿಸಿಕೊಂಡಿದ್ದು ಯಾವಾಗ? ಎಂಬ ಬಗ್ಗೆ ಮಾಹಿತಿ ಇಲ್ಲ.
ಅನುಮಾನ ಹುಟ್ಟಿಸಿದ ಎಸ್‌ಪಿ ಹೇಳಿಕೆ
ಕೆಲ ಪೊಲೀಸ್ ಮೂಲಗಳ ಪ್ರಕಾರ ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಎಂಬುದಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೇಳಿಕೆಯು ಕೆಲವು ಅನುಮಾನ ಹುಟ್ಟಿಸಿದೆ. ಅವರು ಹೇಳಿದ್ದು ಹೀಗಿದೆ.
‘ಮೃತ ಸಂತೋಷನು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಮೂರ್ಛೆರೋಗ(ಪಿಟ್ಸ್) ಬಂದಿದೆ. ಅದನ್ನು ಲಾಕಪ್ ಡೆತ್ ಅನ್ನೋದಿಲ್ಲ. ಕಾನೂನು ಪ್ರಕಾರ ಪೊಲೀಸರ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದರೆ ಅದು ಲಾಕಪ್ ಡೆತ್ ಅಂತಾರೆ. ಪಿಟ್ಸ್ ಆಗಿದೆ ನಮ್ಮವರೇ(ಪೊಲೀಸರು) ಆಸ್ಪತ್ರೆಗೆ ಸೇರಿಸಿದ್ದರು. ಕಾರ್ಡಿಯಾಕ್ ಆರೆಸ್ಟ್ ಆಗಿದೆ ಎಂದು ‘ವಿಜಯಸಾಕ್ಷಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಂತೋಷನ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ.