ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ವಧು ಮಂಗಲಸೂತ್ರ ಹಾಕಿಕೊಳ್ಳುವುದು ಪದ್ಧತಿ ಹಾಗೂ ಇಲ್ಲಿಯವರೆಗೂ ನಡೆದುಕೊಂಡು ಬಂದ ರೂಢಿ. ಆದರೆ, ಈ ಸಂಪ್ರದಾಯಕ್ಕೆ ಇಲ್ಲೊಂದು ಜೋಡಿ ತಿಲಾಂಜಲಿ ಹಾಕಿದೆ. ಇಲ್ಲಿ ವಧು ತಾಳಿ ಕಟ್ಟಿದ್ದು, ವರ ಕಟ್ಟಿಸಿಕೊಂಡಿದ್ದಾರೆ.
ಹುಡುಗಿಯರು ಮಾತ್ರ ಯಾವ ಕಾರಣಕ್ಕೆ ತಾಳಿ ಕಟ್ಟಿಕೊಳ್ಳಬೇಕು ಎಂಬುವುದು ಇಲ್ಲಿ ಹುಡುಗನ ವಾದ. ಇದನ್ನು ಗಮನಿಸಿದ ನೆಟ್ಟಿಗರು ಮಾತ್ರ ಹುಡುಗನ ಕಾರ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವರಂತೂ ಸೀರೆನೂ ಉಟ್ಟಿಕೊಳ್ಳಬಹುದಲ್ಲ ಎಂದು ಕಾಲು ಎಳೆದಿದ್ದಾರೆ.
ಹೀಗೆ ತಾಳಿ ಕಟ್ಟಿಕೊಂಡ ವರನ ಹೆಸರು ಸಾರ್ದೂಲ್ ಕದಮ್. ತಾಳಿ ಕಟ್ಟಿದ ವಧು ತನುಜಾ. ಶಾರ್ದೂಲ್ ಕದಮ್ ತಾಳಿ ಕಟ್ಟಿಕೊಂಡ ಕುರಿತು ಹ್ಯೂಮನ್ ಆಫ್ ಬಾಂಬೆ ಎಂಬ ಫೋಟೋ ಬ್ಲಾಗ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಸ್ಟೋರಿ ನೋಡುತ್ತಿದ್ದಂತೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುತ್ತಿದ್ದಾರೆ.
ಹೀಗೆ ಡಿಫರೆಂಟ್ ಮದುವೆಯಾಗಿರುವ ತನುಜಾ ಹಾಗೂ ಶಾರ್ದೂಲ್ ಅವರು ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಭೇಟಿಯಾದಾಗೊಮ್ಮೆ ಮಹಿಳಾ ವಾದದ ಬಗ್ಗೆ ಮಾತನಾಡಿದ್ದಾರೆ. ಆಗ ಶಾರ್ದೂಲ್ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾವಾದಿ ಎಂದು ಹೇಳಿದ್ದಾರೆ.
ಒಂದು ವರ್ಷ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆಯಲ್ಲಿ ಸ್ತ್ರೀ ಮಾತ್ರ ಮಂಗಲಸೂತ್ರ ಕಟ್ಟಿಸಿಕೊಳ್ಳಬಾರದು. ನಮ್ಮ ಮದುವೆಯಲ್ಲಿ ಹಾಗಾಗುವುದು ಬೇಡ. ನನಗೆ ನೀನೂ ಕೂಡ ತಾಳಿ ಕಟ್ಟಬೇಕು ಎಂದು ತನುಜಾ ಬಳಿ ಶಾರ್ದೂಲ್ ಹೇಳಿದ್ದಾರೆ. ಹೀಗಾಗಿ ತಮ್ಮ ಮದುವೆಯಲ್ಲಿ ಇಬ್ಬರೂ ತಾಳಿ ಧರಿಸಿದ್ದಾರೆ.
ಇದು ಸುದ್ದಿಯಾಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಈ ಜೋಡಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಮಾಡುತ್ತಿರುವುದರಿಂದಾಗಿ ನಮಗೇನು ಸಮಸ್ಯೆಯಾಗಿಲ್ಲ. ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ.