ಹೆಲ್ಮೆಟ್ ಹಾಕದಿದ್ದರೆ ದಂಡ: ತಪ್ಪಿಸಿಕೊಳ್ಳಿ ತಲೆದಂಡ! ಜಿಲ್ಲಾ ಪೊಲೀಸರ ಕಟ್ಟುನಿಟ್ಟಿನ ಕ್ರಮ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೋಮವಾರದಿಂದ ಪೊಲೀಸರು ದ್ವಿಚಕ್ರ ವಾಹನ ಸವಾರರ ತಲೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಉದ್ದೇಶ ಸವಾರರನ್ನು ಟಾರ್ಗೆಟ್ ಮಾಡುವುದಲ್ಲ, ಬದಲಿಗೆ ನಿಮ್ಮ ತಲೆ ಕಾಯ್ದು ನಿಮ್ಮ ಜೀವ ರಕ್ಷಣೆ ಮಾಡುವುದೇ ಆಗಿದೆ.

Advertisement

ಲಾಕ್‌ಡೌನ್ ನಂತರ ಹೆಚ್ಚುತ್ತಿರುವ ಬೈಕ್ ಅಪಘಾತಗಳು ಮತ್ತು ಸಾವುಗಳ ಪ್ರಮಾಣವನ್ನು ಅಧ್ಯಯನ ಮಾಡಿಯೇ ಜಿಲ್ಲಾ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಕಳವಳದ ವಿಷಯ ಏನೆಂದರೆ, ಹೆಲ್ಮೆಟ್ ವಿಷಯದಲ್ಲಿ ಯುವಕರ ಉಡಾಫೆ, ನಿರ್ಲಕ್ಷ್ಯತನ ಮತ್ತು ಮೊಂಡಾಟ ಎಂದಿನಿಂದಲೂ ಹಾಗೇ ಇದೆ. ಇದಕ್ಕೆ ಸೋಮವಾರ ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದವರ ಸಂಖ್ಯೆಯನ್ನೇ ನೀಡಬಹುದು.

ಸೆಪ್ಟೆಂಬರ್ 17ರಿಂದಲೇ ಪೊಲೀಸರು ಜಾಗೃತಿ ಮೂಡಿಸುತ್ತ ಬಂದಿದ್ದರು. ಸೆ. 21ರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೆ ದಂಡ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆದರೆ, ಸೋಮವಾರ ಆಗಿದ್ದೇನು? ನಗರದಲ್ಲಿ 207 ಹೆಲ್ಮೆಟ್ ಧರಿಸದ ಪ್ರಕರಣ ದಾಖಲಾಗಿದ್ದು, 1 ಲಕ್ಷ 3 ಸಾವಿರದ 500 ರೂ. ದಂಡ ವಸೂಲಿ ಮಾಡಲಾಗಿದೆ. ಪೊಲೀಸರು ಇರುವ ವೃತ್ತಗಳನ್ನು ತಪ್ಪಿಸಿ ಸವಾರಿ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚಿದೆ.

    ಯಾಕಿಷ್ಟು ಬೇಜವಾಬ್ದಾರಿತನ?

ಬೈಕ್ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದರೆ ಉಳಿಯುವುದೇ ಅಪರೂಪ. ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದರೆ ವೈದ್ಯರು ಸರಿಪಡಿಸಬಹುದು. ಕೆಲವೊಮ್ಮೆ ಸಣ್ಣಪುಟ್ಟ ನೋವು ಹಾಗೇ ಉಳಿಯಬಹುದು. ಆದರೆ ತಲೆ ಹಾಗಲ್ಲ, ಅದು ತುಂಬ ಸೂಕ್ಷ್ಮ ಭಾಗ. ಮನುಷ್ಯನ ಅಸ್ತಿತ್ವದ ಪ್ರಧಾನ ಕುರುಹು ಆಗಿರುವ ಮೆದುಳನ್ನು ಸಂರಕ್ಷಿಸಿರುವ ಜಾಗ ತಲೆ. ಆ ತಲೆಯನ್ನೇ ನಾವು ಸಂರಕ್ಷಿಸಿಕೊಳ್ಳದಿದ್ದರೆ ಹೇಗೆ?

ಬೈಕ್ ಅಪಘಾತದಲ್ಲಿ ಬಿದ್ದಾಗ, ಗಟ್ಟಿಯಾದ ಭೌತಿಕ ವಸ್ತು ಅಂದರೆ ಕಲ್ಲು, ಟಾರ್ ರಸ್ತೆ, ರಸ್ತೆ ವಿಭಜಕ, ಎದುರಿನ ವಾಹನದ ಭಾಗ, ವಿದ್ಯುತ್ ಕಂಬಗಳಿಗೆ ತಲೆ ಬಡಿದಾಗ ಅದು ನೇರವಾಗಿ ಮೆದುಳಿಗೇ ಹೊಡೆತ ಕೊಡುತ್ತದೆ. ಬಿದ್ದ ವ್ಯಕ್ತಿಯ ತಲೆಯ ಚಲನೆ ನಿಂತರೂ, ಒಳಗೆ ಮೆದುಳು ಚಲಿಸುತ್ತ ಬುರುಡೆಗೆ ಡಿಕ್ಕಿ ಹೊಡೆಯುತ್ತದೆ, ತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಇನ್ನೊಂದು ಬದಿಯ ಬುರುಡೆಗೆ ಬಡಿಯುತ್ತದೆ.

ಮೆದುಳು ಮೆತ್ತಗಿರಹುದು, ಆದರೆ ಬುರುಡೆ ಕಲ್ಲಿನಂತಿರುತ್ತದೆ. ಈ ಎರಡು ಹೊಡೆತಗಳನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಮೆದುಳಿಗೆ ಇಲ್ಲ. ಮೆದುಳು ನಿಷ್ಕ್ರಿಯವಾದರೆ ಅಲ್ಲಿಗೆ ಮನುಷ್ಯನ ಅಸ್ತಿತ್ವವೂ ಕೊನೆಯಾದಂತೆಯೇ.

ಹಾಗಾಗಿ ಅಪಘಾತದಲ್ಲಿ ತಲೆ ರಕ್ಷಿಸಿಕೊಳ್ಳುವುದು ಎಂದರೆ ಅದು ಜೀವ-ಪ್ರಾಣವನ್ನು ಕಾಪಾಡಿಕೊಂಡಂತೆ, ನಿಮ್ಮ ಭೌತಿಕ ಅಸ್ತಿತ್ವವನ್ನು ಜೋಪಾನವಾಗಿ ಕಾಯ್ದುಕೊಂಡಂತೆ. ಇದಕ್ಕಿರುವ ಒಂದೇ ಮಾರ್ಗ ನಿಮ್ಮ ತಲೆ ಕಾಯ್ದುಕೊಳ್ಳಿ. ಅದಕ್ಕಿರುವ ಒಂದೇ ಮಾರ್ಗ ಹೆಲ್ಮೆಟ್ ಧರಿಸುವುದೊಂದೇ ಆಗಿದೆ. ಹೆಲ್ಮೆಟ್ ಧರಿಸಿ, ನಿಮ್ಮ ತಲೆಯೊಂದಿಗೆ ಜೀವವನ್ನೂ ಕಾಪಾಡಿಕೊಳ್ಳಿ.

ಇಲಾಖೆ ನಡೆಸಿದ ಅಧ್ಯಯನ ಮತ್ತು ವಿಶ್ಲೇಷಣೆ ಪ್ರಕಾರ, ಜಿಲ್ಲೆಯಲ್ಲಿ ಲಾಕ್‌ಡೌನ್ ನಂತರ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಿದೆ. ದಿನಕ್ಕೆ ಸರಾಸರಿ ಎರಡು ಸಾವು ಸಂಭವಿಸುತ್ತವೆ. ಹೀಗಾಗಿ ಈಗ ಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯ ಮಾಡುತ್ತಿದ್ದೇವೆ. ಸದ್ಯ ಅವಳಿ ನಗರದಲ್ಲಿ ಮಾತ್ರ ಜಾರಿ ಮಾಡಿದ್ದು, ಜಿಲ್ಲೆಯಾದ್ಯಂತ ವಿಸ್ತರಿಸುತ್ತೇವೆ. ಬರುವ ದಿನಗಳಲ್ಲಿ ಡಿಎಲ್, ವಾಹನ ವಿಮೆ ಇತ್ಯಾದಿ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಯುವಕರು ಹೆಲ್ಮೆಟ್ ಧರಿಸುವುದರ ಮೂಲಕ ತಮ್ಮ ಜೀವದ ಬಗ್ಗೆ ಕಾಳಜಿ ವಹಿಸಲಿ.

-ಎನ್. ಯತೀಶ್, ಎಸ್ಪಿ

    ಖಡಕ್ ಕಮಲಮ್ಮ ಆನ್ ಡ್ಯೂಟಿ

ಸಂಚಾರ ಪೊಲೀಸ್ ವಿಭಾಗದ ಪಿಎಸ್‌ಐ ಕಮಲಮ್ಮ ದೊಡ್ಡಮನಿಯವರಿಗೆ ಬೈಕ್ ಸವಾರರ ಹೇರ್‌ ಸ್ಟೈಲ್ ಕಾಣಬಾರದು. ಅವರಿಗೇನೂ ನಿಮ್ಮ ಮೇಲೆ ಹೊಟ್ಟೆಕಿಚ್ಚಿಲ್ಲ. ಗಂಡನಿಗೇ ದಂಡ ಹಾಕಿದ ಖಡಕ್ ಅಧಿಕಾರಿ ಕಮಲಮ್ಮ. ನಿಮ್ಮ ಜೀವ ಉಳಿಸಲು ಅವರು ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ದಂಡದ ಜೊತೆ ಬುದ್ಧಿವಾದವೂ ಪಕ್ಕಾ. ಕಮಲಮ್ಮ ದಂಡ ಹಾಕ್ತಾರಂತ ಸ್ಪೀಡ್ ಆಗಿ ತಪ್ಪಿಸಿಕೊಳ್ಳಲು ಮುಂದಾಗಬೇಡಿ. ಇದೆಲ್ಲ ಏಕೆ, ಸುಮ್ನೆ ಹೆಲ್ಮೆಟ್ ಹಾಕಿ. ಇದು ನಿಮ್ಮ ವಿಜಯಸಾಕ್ಷಿ ಕಳಕಳಿ.


Spread the love

LEAVE A REPLY

Please enter your comment!
Please enter your name here