ರೈತ ವಿಜಯಗೌಡ ಪಾಟೀಲ್ ಗಂಭೀರ ಆರೋಪ; ವಿಡಿಯೋ ವೈರಲ್
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಪಾರ್ಮ್‌ರ್ ಸುಟ್ಟು ದಿನಗಳೇ ಉರುಳಿದರೂ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಇದರ ಪರಿಣಾಮವಾಗಿ ಜಮೀನನಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳೆಲ್ಲಾ ನೀರಿಲ್ಲದೇ ಒಣಗುತ್ತಿವೆ.
ತಾಲೂಕಿನ ತೆಗ್ಗಿನ ಭಾವನೂರಿನ ರೈತ ವಿಜಯಗೌಡ್ ಅವರ ಜಮೀನಿನಲ್ಲಿ ಇದ್ದ ವಿದ್ಯುತ್ ಟ್ರಾನ್ಸ್‌ಪಾರ್ಮ್‌ರ್ ಸುಟ್ಟಿದೆ. ಇದರಿಂದ ಜಮೀನುಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸಿಲಾಗದೇ ಬೆಳೆ ಬಾಡುತ್ತಿರುವುದನ್ನು ಕಂಡ ಗ್ರಾಮದ ರೈತ ವಿಜಯಗೌಡ ಶಿವನಗೌಡ ಪಾಟೀಲ್ ಎಂಬುವವರು ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ವಿಜಯಗೌಡ ಅವರು ತಮ್ಮ ಒಟ್ಟು ಆರು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಹಾಕಿದ್ದಾರೆ. ಅದರಲ್ಲಿ ಮೂರು ಎಕರೆ ಕ್ಯಾಬಿಜ್, ಎರಡು ಎಕರೆ ಈರುಳ್ಳಿ ಹಾಗೂ ಒಂದು ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆ ಬೆಳೆದಿದ್ದಾರೆ. ಈಗಾಗಲೇ ಬೆಳೆ ಫಸಲು ಕೊಡುವ ಹಂತಕ್ಕೆ ಬಂದಿವೆ. ಈ ಹೊತ್ತಲ್ಲೇ ಹೀಗಾದರೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಿಸಬೇಕಾಗುತ್ತದೆ.
ಈ ಬಗ್ಗೆ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಅಧಿಕಾರಿಗಳು ಕಚೇರಿಗೆ ಬರುವಂತೆ ಸೂಚಿಸುತ್ತಿದ್ದಾರೆ. ಕಚೇರಿಗೆ ಬಾ ಎನ್ನುತ್ತಿರುವುದರರ್ಥ ಅಧಿಕಾರಿಗಳಿಗೆ ದುಡ್ಡು ಕೊಡಬೇಕು. ಹಣ ಕೊಟ್ಟರೆ ಒಂದೇ ದಿನದಲ್ಲಿ ವಿದ್ಯುತ್ ಟಿಸಿ ಹಾಕುತ್ತಾರೆ. ಇಲ್ಲದಿದ್ದರೆ ಇತ್ತ ಬೇಗ ಸುಳಿಯುವುದಿಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ದುಡ್ಡು ಕೊಟ್ಟು ಟಿಸಿ ಹಾಕಿಸಿಕೊಂಡಿದ್ದೇವೆ ಎಂದು ಆರೋಪಿಸಿದರು.

ಸದ್ಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದೇವೆ. ಸಾಲ ಮಾಡಿ ಕೊಟ್ಟಾದರೂ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್ ಹಾಕಿಸಿಕೊಳ್ಳಬೇಕು ಎಂದರೇ ಮೊದಲೇ ಸಾಕಷ್ಟು ಸಾಲ ಇದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಶೀಘ್ರವೇ ವಿದ್ಯುತ್ ಟಿಸಿ ಹಾಕದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಲಾಗುವುದು ಎಂದು ವಿಜಯಗೌಡ ಪಾಟೀಲ್ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.