ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಡಿ.31 ರ ಸಂಜೆ 6 ರಿಂದ ಜ.1 ರವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಡಿ.31 ರ ರಾತ್ರ 8 ಗಂಟೆಯಿಂದ ಬೆಂಗಳೂರಿನ ಪ್ಲೈ ಓವರ್ ಬಂದ್ ಆಗಿರಲಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ನಿಬಂದನೆಗಳಿದ್ದು, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಲು ಅವಕಾಶವಿಲ್ಲ. ಪ್ರತಿಯೊಬ್ಬರು ಕೊವಿಡ್ ನಿಯಮ ಪಾಲಿಸಬೇಕು ಎಂದರು.
ಖಾಸಗಿ ಕ್ಲಬ್ ಗಳು, ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆಚರಣೆಗೆ ಅವಕಾಶವಿದ್ದು, ಯಾವುದೇ ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಹೊಸ ವರ್ಷಾಚರಣೆಗೆ ಡಿಜೆ ಅವಕಾಶವಿಲ್ಲ.
ಡಿ.31 ರಿಂದ ಬೆಂಗಳೂರು ನಗರಾದ್ಯಾಂತ ಹೆಚ್ಚಿನ ಕಡೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತೇವೆ. ಅನಾವಶ್ಯಕವಾಗಿ ಜಾಲಿರೈಡ್ ತೆರಳಲು ಅವಕಾಶವಿಲ್ಲ. ಅಲ್ಲದೇ, ವ್ಹಿಲಿಂಗ್, ಡ್ರಾಗ್ ರೈಡ್ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪಂತ್ ತಿಳಿಸಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಸ್ಥಾಪಿಸಲಾಗುವುದು. ಮಾಲ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು.
ಅಡ್ವಾನ್ಸ್ ಬುಕಿಂಗ್ ಮಾಡಿದ ಶೇ.50 ಜನರಿಗೆ ಮತ್ತು ಪ್ರವೇಶ ಕೂಪನ್ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ರಾತ್ರಿ 11 ಕ್ಕೆ ಬಾರ್, ವೈನ್ ಶಾಪ್ ಬಂದ್ ಮಾಡಬೇಕು. ತುರ್ತು ಸೇವೆ, ತುರ್ತು ಚಟುವಟಿಕೆಗಳಿಗೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.