ಬೀದರ್: ಜಿಲ್ಲೆಯ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಪ್ರಯತ್ನವಾಗಿ, ಗೋರನಳ್ಳಿ ಗ್ರಾಮದ ಶಿವಾಜಿನಗರ ಹಾಗೂ ತೋರಣ ಕಾಲೋನಿಯಲ್ಲಿ ₹1 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಶಾಸಕತ್ವ ಅವಧಿಯಲ್ಲಿ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದರು. “ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಗ್ರಾಮದಲ್ಲೂ ಜನರ ಜೀವನಮಟ್ಟ ಸುಧಾರಣೆ ಆಗಬೇಕು ಎಂಬುದು ನನ್ನ ಗುರಿ” ಎಂದು ಹೇಳಿದರು.
ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಉತ್ತಮ ರಸ್ತೆ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನರಿಗೆ ಸಿಗಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗಿದ್ದು, ರಸ್ತೆ, ನೀರಾವರಿ ಯೋಜನೆ, ಶಾಲಾ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ವಿದ್ಯುತ್ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
“ನನ್ನ ಸೇವೆ ಸಾರ್ವಜನಿಕರ ಕಲ್ಯಾಣಕ್ಕಾಗಿ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಬೇಕು, ಪರಿಹಾರ ನೀಡುವುದು ನನ್ನ ಹೊಣೆಗಾರಿಕೆ” ಎಂದು ಹೇಳಿದ ಶಾಸಕ, ಜನರ ಬೆಂಬಲ ಮತ್ತು ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.



