ಬೀದರ್: ಬೀದರ್ ಜಿಲ್ಲೆಯ ಹುಚುಕನಹಳ್ಳಿ ಹಾಗೂ ಸೀರಕಟಹಳ್ಳಿ ಗ್ರಾಮಗಳ ಸುತ್ತಮುತ್ತ ಇಂದು ಮಧ್ಯಾಹ್ನ ಲಘು ಭೂಕಂಪನ ದಾಖಲಾಗಿದೆ. ಜನವರಿ 28ರಂದು ಮಧ್ಯಾಹ್ನ 1:34ರ ವೇಳೆಗೆ ಸಂಭವಿಸಿದ ಕಂಪನವು ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆಯಾಗಿದೆ.
ಭೂಕಂಪದ ಕೇಂದ್ರಬಿಂದು ರಂಜೋಲಖೇಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಚುಕನಹಳ್ಳಿ ಗ್ರಾಮದ ಸುಮಾರು 1 ಕಿ.ಮೀ ವಾಯವ್ಯ ಭಾಗದಲ್ಲಿದೆ ಎಂದು ತಿಳಿದುಬಂದಿದೆ. ಕಂಪನದ ವೇಳೆ ಭೂಮಿಯಿಂದ ಶಬ್ದ ಕೇಳಿಬಂದ ಕಾರಣ ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾದರು.
ಘಟನೆಯ ಮಾಹಿತಿ ಪಡೆದ ಬಳಿಕ ಬೀದರ್ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಲಘು ಭೂಕಂಪವಾಗಿರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.



