ಧಾರವಾಡ: ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದರ ಜೊತೆಗೆ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿಯೂ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಲಪ್ರಭಾ ಜಲಾಶಯದಿಂದ 1 ಟಿಎಂಸಿ ನೀರು ಧಾರವಾಡ ಜಿಲ್ಲೆಗೆ ಬಿಡುಗಡೆಯಾಗಿದ್ದು, ಇಂದಿನಿಂದ 9 ದಿನಗಳ ಕಾಲ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಯಲಿದೆ.
ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ, ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಸದ್ಯ ಬಿಡುಗಡೆಯಾಗುತ್ತಿರುವ 1 ಟಿಎಂಸಿ ನೀರಿನಿಂದ ಈ ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಕೆರೆ ತುಂಬಿಸಿಕೊಳ್ಳಲು ಅನುಕೂಲವಾಗಲಿದೆ.
ಈ ಹಿಂದೆ ಮಲಪ್ರಭಾ ನೀರಿನಿಂದ ಜಿಲ್ಲೆಯ 81 ಕೆರೆಗಳನ್ನು ತುಂಬಿಸಲಾಗಿತ್ತು. ಅದರಲ್ಲಿ ಸುಮಾರು 50 ಕೆರೆಗಳಲ್ಲಿ ಅರ್ಧದಷ್ಟು ನೀರು ಇನ್ನೂ ಇದೆ. 32 ಕೆರೆಗಳು ಅರ್ಧಕ್ಕಿಂತಲೂ ಕಡಿಮೆ ನೀರು ಹೊಂದಿವೆ. ಅಂತ ಕೆರೆಗಳಿಗೆ ನೀರು ತುಂಬಿಸಲು ಈಗ ಆದ್ಯತೆ ನೀಡಲಾಗಿದೆ. ಇದರಿಂದ 5 ರಿಂದ 6 ತಿಂಗಳವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಸದ್ಯ ಕೃಷಿಗೆ ನೀರು ಬಿಡುವುದಿಲ್ಲ. ಈಗ ಬಿಡುವ ನೀರು ಕೇವಲ ಕುಡಿಯುವುದಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಕಾಲುವೆಗೆ ಹರಿದು ಬರುವ ನೀರನ್ನು ಯಾರೂ ಕೃಷಿಗೆ ಬಳಸುವಂತಿಲ್ಲ. ಇದರ ಬಗ್ಗೆ ನಿಗಾ ವಹಿಸಲು ತಂಡವನ್ನೂ ಕೂಡ ರಚನೆ ಮಾಡಲಾಗಿದೆ. ಕಂದಾಯ, ಆರ್‌ಡಿಪಿಆರ್ ಮತ್ತು ಪೊಲೀಸ್ ಇಲಾಖೆ ಈ ತಂಡದಲ್ಲಿದ್ದು, ಕುಡಿಯಲು ಬರುವ ನೀರನ್ನು ಕೃಷಿಗೆ ಬಳಸುವವರ ಮೇಲೆ ಕ್ರಮ ಕೈಗೊಳ್ಳಲಿದೆ.