ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಇನ್ನು ಕೇವಲ 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಅಲ್ಲದೇ, ಆಗಷ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿದಂತೆ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಸೋಮವಾರ ಒಂದೇ ದಿನ ರಾಜ್ಯದ 94 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಕೊರೊನಾ ಲಸಿಕೆಯ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಎಂಜಿನೀಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಜೂನ್ ತಿಂಗಳಲ್ಲಿ 60 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನೂ ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದೆ. ಇಡೀ ದೇಶದಲ್ಲಿಯೇ ಲಸಿಕೆ ನೀಡುವಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.