ವಿಜಯಸಾಕ್ಷಿ ಸುದ್ದಿ, ರೋಣ : ಶಾಸಕ ಜಿ.ಎಸ್. ಪಾಟೀಲರು ಖನಿಜ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ರೂಗಳ ಧನಾದೇಶವನ್ನು ಖನಿಜ ನಿಗಮದಿಂದ ಬುಧವಾರ ಸಿಎಂ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಲಾಗಿದೆ ಎಂದು ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಖನಿಜ ನಿಗಮದ 2022-23ನೇ ಸಾಲಿನ ಸಿಎಂ ಪರಿಹಾರ ನಿಧಿಗೆ 10 ಕೋಟಿ ರೂಗಳ ಧನಾದೇಶ ಹಾಗೂ 109.07 ಕೋಟಿ ರೂಗಳ ಲಾಭಾಂಶದ ಧನಾದೇಶವನ್ನು ಸಿಎಂ ಸಿದ್ದರಾಮಯ್ಯನವರಿಗೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ವೆಂಕಟೇಶ ಹಾಗೂ ನಿಗಮದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಜಿ.ಎಸ್. ಪಾಟೀಲ ಪರಿಹಾರದ ಚೆಕ್‌ನ್ನು ಹಸ್ತಾಂತರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಜಿ.ಎಸ್. ಪಾಟೀಲ, ಪ್ರಸಕ್ತ ಸಾಲಿನಲ್ಲಿ ಖನಿಜ ನಿಗಮ 754 ಕೋಟಿ ರೂಗಳ ವಹಿವಾಟನ್ನು ನಡೆಸಿತ್ತು. ಖರ್ಚು ವೆಚ್ಚಗಳನ್ನು ತೆಗೆದು 467 ಕೋಟಿ ರೂಗಳ ಲಾಭವನ್ನು ನಿಗಮ ಪಡೆದುಕೊಂಡಿದ್ದು, ಲಾಭಾಂಶದ ಶೇ.30ರಷ್ಟು ಹಣವನ್ನು ಸಿಎಂ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದೇವೆ.
ಜೊತೆಗೆ ಈ ಮೊದಲು 5 ಕೋಟಿ ರೂಗಳು ಸೇರಿ ಒಟ್ಟು 15 ಕೋಟಿ ರೂಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು.
ಧನಾದೇಶವನ್ನು ಹಸ್ತಾಂತರಿಸುವ ಸಂಧರ್ಭದಲ್ಲಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕ ಜಯವೈಭವ್ ಸ್ವಾಮಿ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.